
ಬೆಂಗಳೂರು, 01 ಅಕ್ಟೋಬರ್ (ಹಿ.ಸ.):
ಮುಂಗಾರು ಮಳೆಯ ಸಕ್ರಿಯತೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮದಿಂದ ಸಾಧಾರಣ ಮಟ್ಟದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶಗಳ ಪ್ರಕಾರ, ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.
ಅಕ್ಟೋಬರ್ ತಿಂಗಳ ಆರಂಭದೊಂದಿಗೆ ಚಳಿಗಾಲದ ವಾತಾವರಣ ನಿರ್ಮಾಣವಾಗುತ್ತಿದ್ದು, ಸಾಮಾನ್ಯವಾಗಿ ಈ ಅವಧಿಯಲ್ಲಿ ಧೂಳು ಮತ್ತು ಹೊಗೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ, ಸದ್ಯದ ಹವಾಮಾನ ಪರಿಸ್ಥಿತಿಯಿಂದಾಗಿ ರಾಜ್ಯದ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 31ರಿಂದ 58ರ ನಡುವೆ ದಾಖಲಾಗಿದ್ದು, ಉತ್ತಮದಿಂದ ಸಾಧಾರಣ ಮಟ್ಟದಲ್ಲಿದೆ. ಸಿಟಿ ರೈಲ್ವೆ ನಿಲ್ದಾಣ, ಬಿಟಿಎಂ ಲೇಔಟ್ ಹಾಗೂ ಜಯನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸಾಧಾರಣ ಪ್ರಮಾಣದ ಮಾಲಿನ್ಯ ದಾಖಲಾಗಿದ್ದರೆ, ನಗರದ ಇತರ ಬಹುತೇಕ ಭಾಗಗಳಲ್ಲಿ ಉತ್ತಮ ಗಾಳಿಯ ಗುಣಮಟ್ಟ ಕಂಡುಬಂದಿದೆ.
ಕರಾವಳಿ ಜಿಲ್ಲೆಗಳಲ್ಲಿ AQI 25ರಿಂದ 45ರ ನಡುವೆ ದಾಖಲಾಗಿದ್ದು, ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಮೈಸೂರಿನಲ್ಲಿ 35ರಿಂದ 50ರ ನಡುವೆ AQI ದಾಖಲಾಗಿದ್ದು, ವಾಯು ಗುಣಮಟ್ಟ ಉತ್ತಮದಿಂದ ಸಾಧಾರಣ ಮಟ್ಟದಲ್ಲಿದೆ.
ಕೈಗಾರಿಕಾ ವಲಯಗಳು ಹೆಚ್ಚಿರುವ ಕೆಲವು ಪ್ರದೇಶಗಳಲ್ಲಿಯೂ AQI 50ರಿಂದ 70ರ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಸಾಧಾರಣ ಮಟ್ಟದಲ್ಲಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ AQI 45ರಿಂದ 65ರ ನಡುವೆ ದಾಖಲಾಗಿರುವುದಾಗಿ ಅಂಕಿ-ಅಂಶಗಳು ಸೂಚಿಸಿವೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ನಿಯಂತ್ರಣದಲ್ಲಿದ್ದು, ಮಳೆ ಹಾಗೂ ಗಾಳಿಯ ಚಲನೆಯಿಂದಾಗಿ ವಾತಾವರಣದಲ್ಲಿನ ಧೂಳು ಮತ್ತು ಮಾಲಿನ್ಯಕಾರಕ ಕಣಗಳ ಪ್ರಮಾಣ ಕಡಿಮೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R