ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸಬೇಕು: ರಿಜ್ವಾನ್ ಅರ್ಷದ್
ಬೆಂಗಳೂರು, 01 ಅಕ್ಟೋಬರ್ (ಹಿ.ಸ.): ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ನಮೂನೆ–7ರ ಮೂಲಕ ದೊಡ್ಡ ಪ್ರಮಾಣದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿರುವ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಆಹಾ
ರಿಜ್ವಾನ್ ಅರ್ಷದ್ ಪತ್ರ


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ನಮೂನೆ–7ರ ಮೂಲಕ ದೊಡ್ಡ ಪ್ರಮಾಣದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿರುವ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಪತ್ರ ಬರೆದಿದ್ದಾರೆ.

ಆಗಸ್ಟ್ 20ರಿಂದ ಸೆಪ್ಟೆಂಬರ್ 24ರವರೆಗೆ ಒಟ್ಟು 29,360 ನಮೂನೆ–7ರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಶೇ.93ರಷ್ಟು ಆಕ್ಷೇಪಣೆಗಳನ್ನು ಖಾಸಗಿ ವ್ಯಕ್ತಿಗಳು ಸಲ್ಲಿಸಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಭಾಲ್ಕಿ ಮತ್ತು ಬಬಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲೇ ಕೇವಲ ಮೂರು ದಿನಗಳಲ್ಲಿ 4,726 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಈ ಪೈಕಿ ಅಲ್ಪಸಂಖ್ಯಾತರು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡಿರುವ ಆಕ್ಷೇಪಣೆಗಳ ಸಂಖ್ಯೆ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಈಗಾಗಲೇ ಮನೆ-ಮನೆ ಸಮೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ಮತದಾರರ ವಿವರಗಳ ಪರಿಶೀಲನೆ ನಡೆದಿದೆ. ಹೀಗಿರುವಾಗ ದೊಡ್ಡ ಪ್ರಮಾಣದಲ್ಲಿ ಅಥವಾ ಸಮರ್ಪಕ ಪರಿಶೀಲನೆಯಿಲ್ಲದೆ ಸಲ್ಲಿಕೆಯಾಗುವ ಆಕ್ಷೇಪಣೆಗಳ ಕಾರಣಕ್ಕೆ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಪದೇಪದೇ ಸಮರ್ಥಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಖಾಸಗಿ ವ್ಯಕ್ತಿಗಳಿಂದ ಸಲ್ಲಿಕೆಯಾಗುವ ನಮೂನೆ–7ರ ಆಕ್ಷೇಪಣೆಗಳ ಸ್ವೀಕಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ನಮೂನೆ–7ರ ಆಕ್ಷೇಪಣೆಗಳ ಪ್ರಕ್ರಿಯೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಅವರು ಕೋರಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಸಲ್ಲಿಕೆಯಾಗಿರುವ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಸುಳ್ಳು ಅಥವಾ ದುರುದ್ದೇಶಪೂರ್ವಕ ಆಕ್ಷೇಪಣೆಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಅರ್ಜಿಗಳ ಸ್ವೀಕಾರ ಮತ್ತು ಪರಿಶೀಲನಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಾಗಿದ್ದರೆ, ಅವುಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಮತದಾರರ ಪಟ್ಟಿಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಚುನಾವಣಾ ಪ್ರಕ್ರಿಯೆಯ ದುರುಪಯೋಗದಿಂದ ಯಾವುದೇ ಅರ್ಹ ನಾಗರಿಕರು ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು ಎಂದು ರಿಜ್ವಾನ್ ಅರ್ಷದ್ ಒತ್ತಿಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande