
ಚಂಡೀಗಡ, 07 ಜನವರಿ (ಹಿ.ಸ.) :
ಆ್ಯಂಕರ್ : ಪಂಜಾಬನ್ ಲುಧಿಯಾನದಲ್ಲಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಖಲಿಸ್ತಾನ್ ಕಮಾಂಡೋ ಫೋರ್ಸ್‌ಗೆ ಸೇರಿದ ಇಬ್ಬರು ಕಾರ್ಯಕರ್ತರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ದೊಡ್ಡ ಮಟ್ಟದ ದಾಳಿ ನಡೆಸುವ ಉದ್ದೇಶದಿಂದ ಅವರು ವಿಚಕ್ಷಣ ಕಾರ್ಯದಲ್ಲಿ ತೊಡಗಿದ್ದಾಗ ಬಂಧನಕ್ಕೊಳಗಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಸರ್ಕಾರಿ ಕಚೇರಿಗಳ ಮೇಲೆ ನಡೆದ ದಾಳಿಗಳ ಹಿನ್ನೆಲೆ, ಲುಧಿಯಾನ ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಈ ಸಂದರ್ಭ ಲಭ್ಯವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ ಲುಧಿಯಾನ ಕೌಂಟರ್ ಇಂಟೆಲಿಜೆನ್ಸ್ ಘಟಕದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಅವರು ಬುಧವಾರ ಈ ಕುರಿತು ಮಾಹಿತಿ ನೀಡಿದ್ದು, ಬಂಧಿತ ಆರೋಪಿಗಳು ವಿದೇಶದಲ್ಲಿರುವ ನಿರ್ವಾಹಕರ ಸೂಚನೆ ಮೇರೆಗೆ ಗುರಿ ಹತ್ಯೆಗಳ ಯೋಜನೆ ರೂಪಿಸುತ್ತಿದ್ದರು ಎಂದು ಹೇಳಿದ್ದಾರೆ. ಆರೋಪಿಗಳಿಂದ 9 ಎಂಎಂ ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಖಲಿಸ್ತಾನ್ ಕಮಾಂಡೋ ಫೋರ್ಸ್‌ಗೆ ಸಂಬಂಧಿಸಿದ ಯುನೈಟೆಡ್ ಕಿಂಗ್ಡಮ್ ಹಾಗೂ ಜರ್ಮನಿಯಲ್ಲಿ ನೆಲೆಸಿರುವ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಡಿಜಿಪಿ ತಿಳಿಸಿದ್ದಾರೆ. ಅವರ ನಿರ್ದೇಶನದಂತೆ, ಲುಧಿಯಾನದ ಸರ್ಕಾರಿ ಹಾಗೂ ಪ್ರಮುಖ ಕಚೇರಿಗಳ ಬಗ್ಗೆ ವಿಚಕ್ಷಣ ನಡೆಸುವ ಜವಾಬ್ದಾರಿಯನ್ನು ಆರೋಪಿಗಳಿಗೆ ನೀಡಲಾಗಿತ್ತು.
ಇದಲ್ಲದೆ, ಕೆಲವು ನಿರ್ದಿಷ್ಟ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಕೆಲಸವನ್ನೂ ಅವರಿಗೆ ವಹಿಸಲಾಗಿತ್ತು. ಸಂಗ್ರಹಿಸಿದ ಮಾಹಿತಿಯನ್ನು ತಮ್ಮ ವಿದೇಶಿ ನಿರ್ವಾಹಕರಿಗೆ ಕಳುಹಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಜಿಪಿ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಜಾಲದ ಇತರ ಸದಸ್ಯರನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa