ಸಮುದಾಯ ಆಧಾರಿತ ಮಲ ಕೆಸರು ನಿರ್ವಹಣಾ ಮಾದರಿಗಳಿಗೆ ಜಲಶಕ್ತಿ ಸಚಿವ ಪಾಟೀಲ್ ಶ್ಲಾಘನೆ
ನವದೆಹಲಿ, 07 ಜನವರಿ (ಹಿ.ಸ.) : ಆ್ಯಂಕರ್ : ಸ್ವಚ್ಛ ಭಾರತ ಮಿಷನ್–ಗ್ರಾಮೀಣ ಅಡಿಯಲ್ಲಿ ಸಮುದಾಯ ಆಧಾರಿತ ಮಲ ಕೆಸರು ನಿರ್ವಹಣಾ ಹೊಸ ಮಾದರಿಗಳು ದೇಶದಾದ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿರುವುದನ್ನು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಶ್ಲಾಘಿಸಿದ್ದಾರೆ. ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್
Meeting


ನವದೆಹಲಿ, 07 ಜನವರಿ (ಹಿ.ಸ.) :

ಆ್ಯಂಕರ್ : ಸ್ವಚ್ಛ ಭಾರತ ಮಿಷನ್–ಗ್ರಾಮೀಣ ಅಡಿಯಲ್ಲಿ ಸಮುದಾಯ ಆಧಾರಿತ ಮಲ ಕೆಸರು ನಿರ್ವಹಣಾ ಹೊಸ ಮಾದರಿಗಳು ದೇಶದಾದ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿರುವುದನ್ನು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಶ್ಲಾಘಿಸಿದ್ದಾರೆ. ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಅವರು ಎಲ್ಲಾ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವ ಪಾಟೀಲ್, ಕೇವಲ ಶೌಚಾಲಯಗಳನ್ನು ನಿರ್ಮಿಸುವುದೇ ಸಾಕಾಗುವುದಿಲ್ಲ ಅವುಗಳನ್ನು ಸುರಕ್ಷಿತವಾಗಿ ಖಾಲಿ ಮಾಡುವುದು, ಸಾಗಿಸುವುದು, ಸಂಸ್ಕರಿಸುವುದು ಹಾಗೂ ಮರುಬಳಕೆ ಮಾಡುವುದೂ ಅಷ್ಟೇ ಮುಖ್ಯ ಎಂದು ತಿಳಿಸಿದರು. ನೈರ್ಮಲ್ಯವನ್ನು ಜೀವನ ಶೈಲಿಯ ಭಾಗವಾಗಿಸಲು ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅನಿವಾರ್ಯ ಎಂದು ಅವರು ಒತ್ತಿಹೇಳಿದರು.

ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ಟ್ರಾನ್ಸ್ಜೆಂಡರ್ ಸಮುದಾಯದ ಮೂಲಕ ಮಲ ಕೆಸರು ಸಂಸ್ಕರಣಾ ಘಟಕ ನಿರ್ವಹಿಸುವ ಮಾದರಿಯನ್ನು ಸಚಿವ ಪಾಟೀಲ್ ವಿಶೇಷವಾಗಿ ಪ್ರಶಂಸಿಸಿದರು. ಇದು ನೈರ್ಮಲ್ಯದ ಜೊತೆಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಿರುವ ಸ್ಪೂರ್ತಿದಾಯಕ ಪ್ರಯೋಗವಾಗಿದೆ ಎಂದು ಅವರು ಹೇಳಿದರು.

ಈ ಸಂವಾದದಲ್ಲಿ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಕೆ.ಕೆ. ಮೀನಾ ಹಾಗೂ ಸ್ವಚ್ಛ ಭಾರತ ಮಿಷನ್–ಗ್ರಾಮೀಣ ಮಿಷನ್ ನಿರ್ದೇಶಕಿ ಐಶ್ವರ್ಯ ಸಿಂಗ್ ಉಪಸ್ಥಿತರಿದ್ದರು. ದೇಶದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು, ಪಂಚಾಯತ್ ಸದಸ್ಯರು, ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರು ಹಾಗೂ ಸಮುದಾಯ ಪ್ರತಿನಿಧಿಗಳು ಆನ್‌ಲೈನ್ ಮೂಲಕ ಭಾಗವಹಿಸಿದ್ದರು.

ಗುಜರಾತ್‌ನ ಡಾಂಗ್ ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಜೋಡಿ ಗುಂಡಿಗಳ ಶೌಚಾಲಯಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಎಫ್‌ಎಸ್‌ಎಂ ನಿಯಮಗಳನ್ನು ಪಾಲಿಸಲು ಸಿಂಗಲ್-ಪಿಟ್ ಶೌಚಾಲಯಗಳನ್ನು ತ್ವರಿತವಾಗಿ ಜೋಡಿ ಗುಂಡಿಗಳ ಶೌಚಾಲಯಗಳಾಗಿ ಪರಿವರ್ತಿಸಲಾಗಿದೆ.

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಕಾಲಿಬಿಲ್ಲೌಡ್ ಗ್ರಾಮ ಪಂಚಾಯತ್ ದೇಶದ ಮೊದಲ ಗ್ರಾಮೀಣ ಮಲ ಕೆಸರು ಸಂಸ್ಕರಣಾ ಘಟಕ ಹೊಂದಿರುವ ಪಂಚಾಯತ್ ಆಗಿದ್ದು, ಇಲ್ಲಿ ಸಂಸ್ಕರಿಸಿದ ನೀರನ್ನು ಮೀನು ಸಾಕಣೆಗೆ ಬಳಸಲಾಗುತ್ತಿದೆ. ಜೊತೆಗೆ ಎಂಆರ್‌ಎಫ್ ಕೇಂದ್ರ ಸ್ಥಾಪನೆಯಿಂದ ಪಂಚಾಯತ್‌ಗೆ ಹೊಸ ಆದಾಯದ ಮೂಲವೂ ಸೃಷ್ಟಿಯಾಗಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಹಕಾರದೊಂದಿಗೆ ಕ್ಲಸ್ಟರ್ FSTP ಮಾದರಿಯನ್ನು ಜಾರಿಗೊಳಿಸಲಾಗಿದ್ದು, ನಿರ್ವಹಣೆಯ ಹೊಣೆಗಾರಿಕೆಯನ್ನು ಸ್ಥಳೀಯ ಸಮುದಾಯವೇ ವಹಿಸಿಕೊಂಡಿದೆ. ಲಡಾಖ್‌ನ ಲೇಹ್ ಜಿಲ್ಲೆಯಲ್ಲಿ ತೀವ್ರ ಚಳಿ ಹಾಗೂ ಎತ್ತರದ ಪ್ರದೇಶಗಳಿಗೆ ಹೊಂದುವಂತೆ ಇಕೋಸ್ಯಾನ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಜಾತ್ರೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಸ್ವಸಹಾಯ ಗುಂಪುಗಳು ನಿರ್ವಹಿಸುವ ಮೊಬೈಲ್ ಬಯೋ-ಶೌಚಾಲಯಗಳನ್ನು ಸ್ಥಾಪಿಸಲಾಗಿದ್ದು, ಈ ಮಾದರಿ ತನ್ನದೇ ಆದ ವೆಚ್ಚವನ್ನು ಭರಿಸುವಲ್ಲಿ ಯಶಸ್ವಿಯಾಗಿದೆ.

ಸಂವಾದದ ವೇಳೆ ಭಾಗವಹಿಸುವವರು ಸ್ಥಳೀಯ ಭಾಷೆಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಪಂಚಾಯತ್‌, ಸ್ವಸಹಾಯ ಗುಂಪುಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಿ, ಸ್ಥಳಕ್ಕೆ ತಕ್ಕ ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಹಳ್ಳಿಗಳಲ್ಲಿ ಎಫ್‌ಎಸ್‌ಎಂ ಯಶಸ್ವಿಯಾಗುತ್ತದೆ ಎಂದು ಸಚಿವ ಪಾಟೀಲ್ ಹೇಳಿದರು.

ಕಠಿಣ ಪರಿಸ್ಥಿತಿಗಳಲ್ಲಿಯೂ ಗ್ರಾಮೀಣ ಭಾರತವು ನವೀನ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಗರಗಳಿಗೆ ಕಡಿಮೆಯಿಲ್ಲ ಎಂಬುದನ್ನು ಈ ಪ್ರಯೋಗಗಳು ಸಾಬೀತುಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande