ದೆಹಲಿ ಡಿಎಂಆರ್‌ಸಿ ಫ್ಲಾಟ್‌ನಲ್ಲಿ ಬೆಂಕಿ ; ದಂಪತಿ, ಬಾಲಕಿ ಸಾವು
ನವದೆಹಲಿ, 06 ಜನವರಿ (ಹಿ.ಸ.) : ಆ್ಯಂಕರ್ : ವಾಯುವ್ಯ ದೆಹಲಿಯ ಆದರ್ಶನಗರದ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಇರುವ ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಫ್ಲಾಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಪತಿ, ಪತ್ನಿ ಹಾಗೂ ಅವರ 10 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ ಎಂ
Fire


ನವದೆಹಲಿ, 06 ಜನವರಿ (ಹಿ.ಸ.) :

ಆ್ಯಂಕರ್ : ವಾಯುವ್ಯ ದೆಹಲಿಯ ಆದರ್ಶನಗರದ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಇರುವ ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಫ್ಲಾಟ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಪತಿ, ಪತ್ನಿ ಹಾಗೂ ಅವರ 10 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ದೃಢಪಡಿಸಿದೆ.

ಅಗ್ನಿಶಾಮಕ ಇಲಾಖೆಯ ಮಾಹಿತಿಯಂತೆ, ಇಂದು ಬೆಳಗಿನ ಜಾವ ಸುಮಾರು 2:39ರ ಹೊತ್ತಿಗೆ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಮಾಹಿತಿ ಲಭ್ಯವಾದ ತಕ್ಷಣವೇ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ, ಫ್ಲಾಟ್ ಒಳಗೆ ಮೂರು ಜನರ ಸುಟ್ಟುಹೋದ ಶವಗಳು ಪತ್ತೆಯಾದವು.

ಮೃತರನ್ನು ಅಜಯ್ (42), ಅವರ ಪತ್ನಿ ನೀಲಂ (38) ಹಾಗೂ ಅವರ ಪುತ್ರಿ ಜಾನ್ಹವಿ (10) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಒಂದು ಕೋಣೆಯಲ್ಲಿ ಸಂಗ್ರಹಿಸಲಾಗಿದ್ದ ಗೃಹೋಪಯೋಗಿ ವಸ್ತುಗಳಿಂದ ಬೆಂಕಿ ಪ್ರಾರಂಭವಾಗಿ, ಕ್ಷಣಾರ್ಧದಲ್ಲೇ ಇಡೀ ಕೋಣೆಯನ್ನು ಆವರಿಸಿಕೊಂಡಿತು. ಬೆಂಕಿ ಅತೀವ ವೇಗವಾಗಿ ಹರಡಿದ ಪರಿಣಾಮ ಒಳಗಿದ್ದ ಮೂವರು ಹೊರಬರಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಳಿಗ್ಗೆ 6:40ರ ಹೊತ್ತಿಗೆ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಈ ವೇಳೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿ ರಾಕೇಶ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು, ಅಗ್ನಿ ಅವಘಡದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande