ಅಮೆರಿಕದಲ್ಲಿ ಚಳಿಗಾಲ ಚಂಡಮಾರುತದ ಅಬ್ಬರ
ದೇಶದಾದ್ಯಂತ
Storm


ವಾಷಿಂಗ್ಟನ್, 27 ಜನವರಿ (ಹಿ.ಸ.) :

ಆ್ಯಂಕರ್ : ಅಮೆರಿಕದ ವಿಶಾಲ ಭಾಗಗಳನ್ನು ವಾರಾಂತ್ಯದಲ್ಲಿ ಅಪ್ಪಳಿಸಿದ ಪ್ರಬಲ ಚಳಿಗಾಲದ ಚಂಡಮಾರುತವು ಭಾರೀ ಹಾನಿ ಉಂಟು ಮಾಡಿದ್ದು, ಇದುವರೆಗೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಹಿಮಪಾತ, ಹಿಮಭರಿತ ಬಿರುಗಾಳಿ ಹಾಗೂ ದಾಖಲೆಯ ಮಟ್ಟದ ಚಳಿಯಿಂದಾಗಿ ದೇಶದ ಹಲವಾರು ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಟೆಕ್ಸಾಸ್‌ನ ಫ್ರಿಸ್ಕೊ ನಗರದಲ್ಲಿ ಸ್ಲೆಡ್ಡಿಂಗ್ ಅಪಘಾತದಲ್ಲಿ 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಆಸ್ಟಿನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಶಂಕಿತ ಲಘೂಷ್ಣತೆಯಿಂದ ಸಾವನ್ನಪ್ಪಿದ್ದಾನೆ. ಲೂಸಿಯಾನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್‌ನಲ್ಲಿ ಸ್ಲೆಡ್ಡಿಂಗ್ ಅಪಘಾತದಲ್ಲಿ 17 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದರೆ, ಉತ್ತರ ಕೆರೊಲಿನಾದ ಹೆದ್ದಾರಿಯೊಂದರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.

ನ್ಯೂಯಾರ್ಕ್ ನಗರದ ಮೇಯರ್ ಝೋಹ್ರಾನ್ ಮಮ್ದಾನಿ ಅವರು, ವಾರಾಂತ್ಯದಲ್ಲಿ ನಗರದ ಬಯಲಿನಲ್ಲಿ ಐದು ಮಂದಿ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಕಾನ್ಸಾಸ್‌ನಲ್ಲಿ ಚಳಿಯಿಂದ ಸಾವನ್ನಪ್ಪಿದ ಮಹಿಳೆಯೊಬ್ಬರು ಹಿಮದಲ್ಲಿ ಆವೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮ್ಯಾಸಚೂಸೆಟ್ಸ್‌ನಲ್ಲಿ ಸ್ನೋಪ್ಲೋ ವಾಹನದ ಡಿಕ್ಕಿಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಟೆನ್ನೆಸ್ಸಿಯಲ್ಲಿ ಹವಾಮಾನ ಸಂಬಂಧಿತ ಮೂರು ಸಾವುಗಳು ದಾಖಲಾಗಿವೆ.

ರಾಷ್ಟ್ರೀಯ ಹವಾಮಾನ ಸೇವೆ ಮಾಹಿತಿ ಪ್ರಕಾರ, ಟೆಕ್ಸಾಸ್‌ನಿಂದ ನ್ಯೂ ಇಂಗ್ಲೆಂಡ್‌ವರೆಗಿನ ಸುಮಾರು 200 ಮಿಲಿಯನ್ ಜನರು ಶೀತ ಎಚ್ಚರಿಕೆಯ ಅಡಿಯಲ್ಲಿ ಇದ್ದಾರೆ.

ಅಮೆರಿಕದ ಪೂರ್ವ ಭಾಗದ ಮೂರನೇ ಎರಡರಷ್ಟು ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನ, ತೀವ್ರ ಚಳಿ ಮತ್ತು ದಾಖಲೆಯ ಮಟ್ಟದ ಶೀತ ವಾತಾವರಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸ್ಥಿತಿ ಫೆಬ್ರವರಿ ಆರಂಭದವರೆಗೆ ಮುಂದುವರಿಯಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಚಂಡಮಾರುತದ ಪರಿಣಾಮ ದೇಶದಾದ್ಯಂತ 8 ಲಕ್ಷಕ್ಕೂ ಹೆಚ್ಚು ಜನರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಟೆನ್ನೆಸ್ಸಿ, ಮಿಸ್ಸಿಸ್ಸಿಪ್ಪಿ ಮತ್ತು ಲೂಸಿಯಾನಾ ರಾಜ್ಯಗಳು ಹೆಚ್ಚು ಹಾನಿಗೊಳಗಾಗಿವೆ. ವಿಮಾನ ಸಂಚಾರಕ್ಕೂ ಭಾರೀ ವ್ಯತ್ಯಯ ಉಂಟಾಗಿದ್ದು, ಭಾನುವಾರ 10,500ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಯಿತು. ಸೋಮವಾರವೂ ಸುಮಾರು 4,000 ವಿಮಾನಗಳು ರದ್ದಾಗಿವೆ.

ಹಿಮಪಾತದ ಪ್ರಮಾಣ ಮ್ಯಾಸಚೂಸೆಟ್ಸ್‌ನ ಕೆಲವು ಪ್ರದೇಶಗಳಲ್ಲಿ 20 ಇಂಚುಗಳಷ್ಟು ಹಿಮ ಬಿದ್ದಿದ್ದು, ಪೆನ್ಸಿಲ್ವೇನಿಯಾದಲ್ಲಿ 23 ಇಂಚುಗಳಷ್ಟು ಹಿಮಪಾತ ದಾಖಲಾಗಿದೆ. ಮಧ್ಯ ಹಾಗೂ ಪೂರ್ವ ಅಮೆರಿಕದ ಬಹುತೇಕ ಭಾಗಗಳಲ್ಲಿ ಹಿಮಪಾತ ತಾತ್ಕಾಲಿಕವಾಗಿ ನಿಂತಿದ್ದರೂ, ತೀವ್ರ ಚಳಿಯ ಪರಿಣಾಮಗಳು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande