
ಬೆಂಗಳೂರು, 26 ಜನವರಿ (ಹಿ.ಸ.) :
ಆ್ಯಂಕರ್ : ‘ಪೊಗರು’, ‘ವಿಕ್ಟರಿ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಸಂಭಾಷಣೆ ಬರೆದು ಖ್ಯಾತಿ ಗಳಿಸಿದ್ದ ಡೈಲಾಗ್ ರೈಟರ್ ಪ್ರಶಾಂತ್ ರಾಜಪ್ಪ ಅವರು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರದ ಶೀರ್ಷಿಕೆ ಬಹಿರಂಗವಾಗಿದೆ. ಈ ಚಿತ್ರಕ್ಕೆ ‘ಅನಂತ ಪದ್ಮನಾಭ’ ಎಂದು ಹೆಸರಿಡಲಾಗಿದ್ದು, ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯೊಂದಿಗೆ ಸಿನಿರಂಗದಲ್ಲಿ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ನಟ ರಿಷಿ ನಾಯಕನಾಗಿ ಅಭಿನಯಿಸುತ್ತಿದ್ದು, ಖ್ಯಾತ ನಟ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಅಂಜಲಿ ಅನೀಶ್ ಅಭಿನಯಿಸಿದ್ದಾರೆ.
ಈಗಾಗಲೇ ಟೈಟಲ್ ಬಿಡುಗಡೆಗೂ ಮುನ್ನ ವಿಡಿಯೋ ಕಂಟೆಂಟ್ ಮೂಲಕ ಗಮನ ಸೆಳೆದಿದ್ದ ನಿರ್ದೇಶಕರು, ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಎರಡು ತಲೆಮಾರುಗಳ ಬದುಕು, ಜೀವನ ಮೌಲ್ಯಗಳು ಹಾಗೂ ಸಂಬಂಧಗಳ ಕುರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಾಮಿಡಿ–ಡ್ರಾಮಾ ಅಂಶಗಳು ಅಡಕವಾಗಿವೆ. ‘ಅನಂತ ಪದ್ಮನಾಭ’ ಚಿತ್ರವನ್ನು ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದು, ಬೆಂಗಳೂರು, ಸಾಗರ ಹಾಗೂ ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ಅಶ್ವಿನ್ ಪಿ. ಕುಮಾರ್ ಸಂಗೀತ ಸಂಯೋಜನೆ ನೀಡಿದ್ದು, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆಯತ್ತ ಹೆಜ್ಜೆ ಇಟ್ಟಿದೆ.
ಟೈಟಲ್ ಮೂಲಕವೇ ಸದ್ದು ಮಾಡುತ್ತಿರುವ ‘ಅನಂತ ಪದ್ಮನಾಭ’ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa