
ಬಳ್ಳಾರಿ, 24 ಜನವರಿ (ಹಿ.ಸ.) :
ಆ್ಯಂಕರ್ : ಶಾಸಕ ಜಿ. ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಮಾಲೀಕತ್ವದ ಜಿ-ಸ್ಕ್ವೇರ್‍ನಲ್ಲಿರುವ `ಮಾಡಲ್ ಹೌಸ್'ಗೆ ಬೆಂಕಿ ಪ್ರಕರಣಕ್ಕೆ ರೀಲ್ಸ್ ಹುಚ್ಚು ಕಾರಣವಾಗಿದ್ದು, ರಾಜಕೀಯವಾಗಲೀ, ರಾಜಕಾರಣವಾಗಲೀ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಆರು ಬಾಲಾಪರಾಧಿಗಳು ಸೇರಿ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ , ಕೌಲ್‍ಬಜಾರ್ ಟೈಲರ್ ಸ್ಟ್ರೀಟ್‍ನ ಲೇಡಿಸ್ ಟೈಲರ್ ಸೋಹೈಲ್ @ ಸಾಹಿಲ್ (18) ಮತ್ತು ಟೈಲರ್ ಸ್ಟ್ರೀಟ್‍ನ ಫ್ಯಾನ್ಸಿ ಸ್ಟೋರ್ಸ್‍ನ ಉದ್ಯೋಗಿ ಅಸ್ತಮ್ @ ಸುರೇಶ್ (32) ಅವರನ್ನು ಬಂಧಿಸಲಾಗಿದೆ. ಉಳಿದಂತೆ ಆರು ಜನರು ಅಪ್ರಾಪ್ತರಾಗಿದ್ದು, ಅವರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದರು.
ಶುಕ್ರವಾರ ಸಂಜೆ `ಮಾಡಲ್ ಹೌಸ್'ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿರುವ ಕುರಿತು ರಿಜ್ವಾನ್ ಅವರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ದೂರು ದಾಖಲಿಸಿದ್ದಾರೆ ಎಂದರು.
ಕೆಲವರು ರೀಲ್ಸ್ ಮಾಡಲಿಕ್ಕಾಗಿ ಮಾಡಲ್ ಹೌಸ್‍ನ ಮೇಲ್ಛಾವಣಿ (ರೂಫ್‍ಟಾಪ್) ಮೇಲೆ ಹೋಗಿ ಚಿತ್ರೀಕರಣ ನಡೆಸುತ್ತಿದ್ದಾಗ, ಗುಂಪಿನಲ್ಲಿದ್ದ ಇಬ್ಬರು ಬೆಂಕಿ ಹಚ್ಚಿದ್ದು ಘಟನೆಗೆ ಕಾರಣವಾಗಿದೆ. ಅಗ್ನಿ ಆವರಿಸುತ್ತಿದ್ದಂತೆ ರೀಲ್ಸ್ ಮಾಡುತ್ತಿದ್ದವರಲ್ಲಿ ಆತಂಕ ಮೂಡಿದ ಕಾರಣ ಎಲ್ಲರೂ ಸ್ಥಳದಿಂದ
ಪರಾರಿಯಾಗಿದ್ದಾರೆ. ಬಂಧಿತರ ಹೇಳಿಕೆ, ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳು ಹೊಂದಿಕೆಯಾಗಿವೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್