
ದಾವೋಸ್, 23 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ RPSG ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ₹10,500 ಕೋಟಿ ರೂ.ಗಳ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದೆ ಎಂದು ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ ಅವರು ತಿಳಿಸಿದ್ದಾರೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯ ಸಂದರ್ಭದಲ್ಲಿ, RPSG ಸಮೂಹದ ಉಪಾಧ್ಯಕ್ಷರಾದ ಶಶ್ವತ್ ಗೋಯಂಕಾ ಅವರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ, ಕರ್ನಾಟಕದಲ್ಲಿ ಸಮೂಹದ ವಿಸ್ತರಿಸುತ್ತಿರುವ ಹೂಡಿಕೆ ಯೋಜನೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ವಿಜಯಪುರ ಹಾಗೂ ಬಳ್ಳಾರಿಯನ್ನು ಕೇಂದ್ರವಾಗಿಸಿಕೊಂಡು ನವೀಕರಿಸಬಹುದಾದ ಇಂಧನ ವಲಯದಲ್ಲಿ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಸಮೂಹವು ಈ ವೇಳೆ ಸ್ಪಷ್ಟಪಡಿಸಿದೆ.
ಸಭೆಯಲ್ಲಿ ಈ ಹೂಡಿಕೆ ಯೋಜನೆಗಳನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ನೀತಿ ಉಪಕರಣಗಳು, ಪ್ರೋತ್ಸಾಹಕಗಳು ಮತ್ತು ಸಂಸ್ಥಾತ್ಮಕ ಬೆಂಬಲಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಈ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೀತಿ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂಬುದನ್ನು ಸಚಿವ ಎಂ.ಬಿ. ಪಾಟೀಲ ಅವರು ಪುನರುಚ್ಚರಿಸಿದರು.
ಇದೇ ವೇಳೆ, ರಾಜ್ಯದಲ್ಲಿ ಸೌರ ಮಾಡ್ಯೂಲ್ ಹಾಗೂ ಸೆಲ್ ತಯಾರಿಕೆ ಸೇರಿದಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸದಾಗಿ ಮೂಡಿಬರುತ್ತಿರುವ ಅವಕಾಶಗಳನ್ನು ಅನ್ವೇಷಿಸಲು RPSG ಸಮೂಹವನ್ನು ಸರ್ಕಾರದ ವತಿಯಿಂದ ಉತ್ತೇಜಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa