ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ; ವಿಧಾನ ಸಭೆಯಲ್ಲಿ ಗದ್ದಲ
ಪ್ರತಿ
Session


ಬೆಂಗಳೂರು, 23 ಜನವರಿ (ಹಿ.ಸ.) :

ಆ್ಯಂಕರ್ : ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಒಂದು ನಿಮಿಷದ ಭಾಷಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಇಂದು ತೀವ್ರ ಗದ್ದಲ ಹಾಗೂ ಕೋಲಾಹಲ ಉಂಟಾಯಿತು. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಪರಸ್ಪರ ಆರೋಪ–ಪ್ರತ್ಯಾರೋಪಗಳು, ಟೀಕೆ–ನಿಂದನೆಗಳು ಕೇಳಿಬಂದವು.

ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಜಂಟಿ ಅಧಿವೇಶನದ ವೇಳೆ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ನಮ್ಮ 18 ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ. ಹಾಗಾದರೆ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಏನು ಕ್ರಮ ಎಂಬುದರ ಬಗ್ಗೆ ಸ್ಪೀಕರ್ ರೂಲಿಂಗ್ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರು ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ. ಹೆಚ್.ಕೆ. ಪಾಟೀಲ್ ಅವರು ರಾಜ್ಯಪಾಲರು “ಓಡಿ ಹೋದರು” ಎನ್ನುವ ಹೇಳಿಕೆ ಸರಿಯಲ್ಲ. ರಾಷ್ಟ್ರಗೀತೆ ಆರಂಭವಾಗಿದ್ದರೆ ರಾಜ್ಯಪಾಲರು ಅಲ್ಲಿಯೇ ಇರುತ್ತಿದ್ದರು ಎಂದು ಅಶೋಕ್ ಸಮರ್ಥಿಸಿಕೊಂಡರು.

ಶಾಸಕರಾದ ಅಶ್ವಥ್ ನಾರಾಯಣ ಹಾಗೂ ಸುನೀಲ್ ಕುಮಾರ್ ಕೂಡಾ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ ಮಾತಿನ ಭರದಲ್ಲಿ ಸುನೀಲ್ ಕುಮಾರ್ “ಇದು ಗೂಂಡಾ ಸರ್ಕಾರ” ಎಂದು ಹೇಳಿದ್ದು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿ ಸದನದಲ್ಲಿ ಜಟಾಪಟಿ ತೀವ್ರವಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ರಾಜ್ಯಪಾಲರು ಭಾಷಣ ಓದದೇ ತಿರಸ್ಕರಿಸಿದ್ದು ಸಂವಿಧಾನದ 176(1)ನೇ ವಿಧಿಯ ಉಲ್ಲಂಘನೆ ಎಂದು ವಾದಿಸಿದರು. ರಾಷ್ಟ್ರಗೀತೆಗೂ ಮುನ್ನವೇ ಸದನದಿಂದ ಹೊರನಡೆದಿದ್ದು ರಾಷ್ಟ್ರಗೀತೆಗೆ ಅಪಮಾನವಾಗಿದೆ ಎಂದು ಆರೋಪಿಸಿದರು.

“ನಾನು ರಾಜ್ಯಪಾಲರನ್ನು ತಡೆಯಲಿಲ್ಲ. ಮುಖ್ಯಮಂತ್ರಿ ಕರೆದ ಕಾರಣಕ್ಕೆ ಹಿಂದೆ ಹೋದೆ ಅಷ್ಟೇ” ಎಂದು ತಮ್ಮ ಮೇಲಿನ ಆರೋಪಗಳನ್ನು ಅವರು ತಳ್ಳಿ ಹಾಕಿದರು.

ರಾಜ್ಯಪಾಲರು ಸಂವಿಧಾನ ಹಾಗೂ ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕನ್ನಡ ನಾಡಿನ ಜನತೆ ಹಾಗೂ ಈ ಸದನದ ಮುಂದೆ ಕ್ಷಮೆ ಯಾಚಿಸಬೇಕು ಎಂದು ಹೆಚ್.ಕೆ. ಪಾಟೀಲ್ ಆಗ್ರಹಿಸಿದರು.

ಇದೇ ವೇಳೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡುವಾಗ ಮಧ್ಯೆ ಆಕ್ಷೇಪಿಸಿದ ಸಚಿವ ಬೈರತಿ ಸುರೇಶ್‌ಗೆ ಸಂಬಂಧಿಸಿದ ಅಸಭ್ಯ ಪದಪ್ರಯೋಗದಿಂದ ಆಡಳಿತ–ವಿಪಕ್ಷಗಳ ನಡುವೆ ಮತ್ತಷ್ಟು ಕಿಚ್ಚು ಹತ್ತಿತು. ನಂತರ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ, ಆ ಪದವನ್ನು ಅಧಿಕೃತ ದಾಖಲೆಯಿಂದ ಕೈಬಿಡಲಾಯಿತು.

ಕೊನೆಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ಖಾದರ್, ರಾಜ್ಯಪಾಲರ ನಡೆ ಹಾಗೂ ನಂತರ ನಡೆದ ಘಟನೆಗಳ ಕುರಿತು ಮುಂದಿನ ವಾರ ರೂಲಿಂಗ್ ನೀಡಲಾಗುವುದು ಎಂದು ಸದನಕ್ಕೆ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande