
ಕೊಪ್ಪಳ, 21 ಜನವರಿ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನಲ್ಲಿ ಯುವಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ ಆಸಕ್ತ ಯುವಜನರು ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜನವರಿ 27 ರೊಳಗಾಗಿ ಕಚೇರಿ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಹಾಗೂ ನಂತರ ಬಂದಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ತರಬೇತಿ ಶಿಬಿರವು 45 ದಿನಗಳ ಅವಧಿಯದ್ದಾಗಿದ್ದು, ಫೆಬ್ರವರಿ 1 ರಿಂದ ಮಾರ್ಚ್ 17 ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿಯನ್ನು ನೀಡಲಾಗುವುದು.
ತರಬೇತಿ ಶಿಬಿರದಲ್ಲಿ 30 ಶಿಬಿರಾರ್ಥಿಗಳಿಗೆ ಸೀಮಿತಗೊಳಿಸಬೇಕಾಗಿರುವುದರಿಂದ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಶಿಬಿರದಲ್ಲಿ ಹಾಜರಾಗುವ ಯುವಜನರಿಗೆ ಉಟೋಪಹಾರ, ಪ್ರಮಾಣ ಪತ್ರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಯುವಜನರಿಗೆ ಸಾಮಾನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
ಅರ್ಜಿದಾರರು ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, 18 ರಿಂದ 35 ವರ್ಷದೊಳಗಿರಬೇಕು. ದೈಹಿಕವಾಗಿ ಸದೃಢವಾಗಿರಬೇಕು. ಕರ್ನಾಟಕ ರಾಜ್ಯದವರಾಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕಡ್ಡಾಯವಾಗಿ ಆರ್.ಡಿ. ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸಿರಬೇಕು.
ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ಪ್ರತಿಯನ್ನು ಲಗತ್ತಿಸಬೇಕು. ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಶಿಸ್ತು ಹಾಗೂ ಸಂಯಮದಿ೦ದ ವರ್ತಿಸಬೇಕು.
ಅನುಚಿತವಾಗಿ ವರ್ತಿಸಿದಲ್ಲಿ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಜನರಿಗೆ ಲಘು ಉಪಹಾರ ಒದಗಿಸಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್