ಕರಾಚಿ ಶಾಪಿಂಗ್ ಪ್ಲಾಜಾ ಬೆಂಕಿ ದುರಂತ ; 26 ಸಾವು
ಇಸ್ಲಾಮಾಬಾದ್, 20 ಜನವರಿ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ಇರುವ ಎಂ.ಎ. ಜಿನ್ನಾ ರಸ್ತೆಯ ಗುಲ್ ಶಾಪಿಂಗ್ ಪ್ಲಾಜಾದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ. 36 ಗಂಟೆಗಳ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾ
Karachi fire


ಇಸ್ಲಾಮಾಬಾದ್, 20 ಜನವರಿ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ಇರುವ ಎಂ.ಎ. ಜಿನ್ನಾ ರಸ್ತೆಯ ಗುಲ್ ಶಾಪಿಂಗ್ ಪ್ಲಾಜಾದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ. 36 ಗಂಟೆಗಳ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ.

ದುನ್ಯಾ ನ್ಯೂಸ್ ವರದಿ ಪ್ರಕಾರ, ತೀವ್ರವಾಗಿ ಸುಟ್ಟುಹೋದ ಶವಗಳಲ್ಲಿ ಇದುವರೆಗೆ 18 ಮಂದಿಯನ್ನು ಮಾತ್ರ ಗುರುತಿಸಲಾಗಿದ್ದು, ಉಳಿದ ಶವಗಳ ಗುರುತಿಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಮಾದರಿಗಳನ್ನು ಕರಾಚಿ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಶಸ್ತ್ರಚಿಕಿತ್ಸಕಿ ಡಾ. ಸಾಮಿಯಾ ತಿಳಿಸಿದ್ದಾರೆ.

ಬಹುಮಹಡಿ ಶಾಪಿಂಗ್ ಪ್ಲಾಜಾದ ಬಹುಭಾಗ ಬೆಂಕಿಯಿಂದ ಕುಸಿದಿದ್ದು, ಉಳಿದ ಕಟ್ಟಡವೂ ಯಾವುದೇ ಸಮಯದಲ್ಲಿ ನೆಲಸಮವಾಗುವ ಅಪಾಯವಿದೆ. ಸುರಕ್ಷತಾ ದೃಷ್ಟಿಯಿಂದ ಇಡೀ ಕಟ್ಟಡವನ್ನು ಕೆಡವಲು ಸಿಂಧ್ ಸರ್ಕಾರ ನಿರ್ಧರಿಸಿದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.

ಅಗ್ನಿಶಾಮಕ ದಳದ ಉಸ್ತುವಾರಿ ಹುಮಾಯೂನ್ ಅಹ್ಮದ್ ಅವರ ಪ್ರಕಾರ, ಶನಿವಾರ ರಾತ್ರಿ ಆರಂಭವಾದ ಬೆಂಕಿ ಸುಮಾರು 33 ಗಂಟೆಗಳ ಕಾಲ ಭುಗಿಲೆದ್ದಿತ್ತು. ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ನೌಕಾಪಡೆ, ಸಿಂಧ್ ರೇಂಜರ್ಸ್, ಕೆಎಂಸಿ, ರೆಸ್ಕ್ಯೂ ಸಿಂಧ್ ಸಿಬ್ಬಂದಿ ಹಾಗೂ ಸ್ವಯಂಸೇವಕರು ಪಾಲ್ಗೊಂಡಿದ್ದರು. ಒಟ್ಟು ಸುಮಾರು 200 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು, ಘಟನೆ ಸ್ಥಳದಿಂದ ಇದುವರೆಗೆ 26 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಸಣ್ಣಪುಟ್ಟ ಸುಟ್ಟಗಾಯಗಳಿಗೆ ಒಳಗಾಗಿದ್ದ 22 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮೂಲಗಳ ಪ್ರಕಾರ 65 ರಿಂದ 76ರ ವರೆಗೆ ಜನರು ಇನ್ನೂ ಕಾಣೆಯಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆಯಿದ್ದು, ಸಾವಿನ ಸಂಖ್ಯೆ 50 ರಿಂದ 60ರ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪ್ಲಾಜಾದಲ್ಲಿ ಸುಮಾರು 1,200ಕ್ಕೂ ಹೆಚ್ಚು ಅಂಗಡಿಗಳಿದ್ದು, ಈ ದುರಂತದಿಂದ ಸಾವಿರಾರು ವ್ಯಾಪಾರಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಪೀಡಿತರಿಗೆ ಪುನರ್ವಸತಿ ಹಾಗೂ ಪರಿಹಾರ ನೀಡಲು ಸಮಿತಿಯನ್ನು ರಚಿಸಲಾಗಿದೆ ಎಂದು ಮುರಾದ್ ಅಲಿ ಶಾ ಹೇಳಿದರು.

ಘಟನೆಯ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ತನಿಖೆ ನಡೆಸಲಾಗುತ್ತಿದ್ದು, ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿದ್ದಲ್ಲಿ ನ್ಯಾಯಾಂಗ ತನಿಖೆಯನ್ನೂ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande