
ಗದಗ, 02 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ನರೇಗಲ್ ಪಟ್ಟಣದಲ್ಲಿ ನಡೆದ ಅಕ್ಷರ ಜಾತ್ರೆ ಕಾರ್ಯಕ್ರಮದ ಅಂಗವಾಗಿ ‘ಆಚಾರವೇ ಸ್ವರ್ಗ’ ಎಂಬ ಮುಖ್ಯ ಗೋಷ್ಠಿಯಲ್ಲಿ ನೈತಿಕ ಮೌಲ್ಯಗಳು ಮತ್ತು ಮೊಬೈಲ್ ಬಳಕೆ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ಉಪನ್ಯಾಸಕ ಜಿ.ಆರ್. ರವದಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಸದಾಚಾರದಲ್ಲಿರುವವನಿಗೆ ಸಮಾಜದಲ್ಲಿ ಮಾನ–ಸನ್ಮಾನ ದೊರಕುತ್ತದೆ. ಅನಾಚಾರಿಯು ಎಂದಿಗೂ ಗೌರವಕ್ಕೆ ಪಾತ್ರನಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸದಾಚಾರಿಯಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ನೈತಿಕ ಮೌಲ್ಯಗಳು ವ್ಯಕ್ತಿಯನ್ನು ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಮಾನವೀಯ ಮೌಲ್ಯಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ. ಮೊಬೈಲ್ ಬಳಕೆ ಅತಿಯಾಗಬಾರದು. ಅತಿಯಾದದ್ದು ಯಾವುದು ಇದ್ದರೂ ವಿಷಕ್ಕೆ ಸಮಾನವಾಗುತ್ತದೆ. ಕೈಯಲ್ಲಿ ಮೊಬೈಲ್‌ಗಿಂತ ಪುಸ್ತಕ ಹಿಡಿದು ಬುದ್ಧಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಮತ್ತು ಆಹಾರ ಕುರಿತು ಉಪನ್ಯಾಸ ನೀಡಿದ ಡಾ. ದೀಪಾ ಪಾಟೀಲ ಮಾತನಾಡಿ, ನಿತ್ಯದ ಆಹಾರದಲ್ಲಿ ಸಮತೋಲನ ಆಹಾರವನ್ನು ಸೇವಿಸುವ ಅಭ್ಯಾಸ ಅಗತ್ಯ. ಶರ್ಕರ, ಪಿಷ್ಟ, ಖನಿಜಾಂಶಗಳು ಸಮರ್ಪಕವಾಗಿ ಇರುವ ಆಹಾರ ದೇಹದ ಪೋಷಣೆಗೆ ಅಗತ್ಯವಿದೆ. ಆಹಾರವನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಿದರೆ ರೋಗಗಳಿಂದ ದೂರ ಇರಲು ಸಾಧ್ಯ. ಸಾತ್ವಿಕ ಆಹಾರ ಸೇವನೆಯಿಂದ ಸಾತ್ವಿಕ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು. ದಕ್ಷಿಣ ಭಾರತದ ಊಟವು ಸಮತೋಲನದಿಂದ ಕೂಡಿರುವುದು ನಮ್ಮ ಭಾಗ್ಯದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಕೆ. ಕಾಳೆ ಮಾತನಾಡಿ, ಆಹಾರ ಸೇವನೆಗೆ ಹಿಂಜರಿಕೆ ಬೇಡ. ಆದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಚಟುವಟಿಕೆಗಳ ಕಡೆ ಗಮನಹರಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಮನೆಯಲ್ಲಿ ನೀಡುವ ಆಹಾರವೇ ಇಂದಿನ ಆರೋಗ್ಯಕ್ಕೆ ಮೂಲ ಕಾರಣ. ಸೊಪ್ಪು–ತರಕಾರಿಗಳನ್ನು ನಿತ್ಯವೂ ಸೇವಿಸಬೇಕು. ಎಣ್ಣೆ ಮತ್ತು ಕರಿದ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಡಾ. ದೀಪಾ ಪಾಟೀಲ ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ದೇಹವು ನಾವು ನೀಡುವ ತರಬೇತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ದೇಹಕ್ಕೆ ಸೂಕ್ತ ತರಬೇತಿ ನೀಡುವ ವಿಧಾನವನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP