ದುಷ್ಕರ್ಮಿಗಳ ಬೆಂಕಿ ಕೃತ್ಯಕ್ಕೆ ಭಸ್ಮವಾದ ಮೆಕ್ಕೆಜೋಳ
ಗದಗ, 02 ಜನವರಿ (ಹಿ.ಸ.) : ಆ್ಯಂಕರ್ : ಸಾಲ ಸೂಲ ಮಾಡಿ, ಹಗಲು ರಾತ್ರಿ ಬೆವರು ಸುರಿಸಿ ಬೆಳೆದ ಮೆಕ್ಕೆಜೋಳವನ್ನು ಮಾರಾಟಕ್ಕೆ ರಾಶಿ ಮಾಡುವ ಹೊತ್ತಲ್ಲೇ ದುಷ್ಕರ್ಮಿಗಳ ಅಮಾನವೀಯ ಕೃತ್ಯಕ್ಕೆ ರೈತ ಕುಟುಂಬದ ಬದುಕು ಭಸ್ಮವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಾಲ್ವರು ದುಷ
ಫೋಟೋ


ಗದಗ, 02 ಜನವರಿ (ಹಿ.ಸ.) :

ಆ್ಯಂಕರ್ : ಸಾಲ ಸೂಲ ಮಾಡಿ, ಹಗಲು ರಾತ್ರಿ ಬೆವರು ಸುರಿಸಿ ಬೆಳೆದ ಮೆಕ್ಕೆಜೋಳವನ್ನು ಮಾರಾಟಕ್ಕೆ ರಾಶಿ ಮಾಡುವ ಹೊತ್ತಲ್ಲೇ ದುಷ್ಕರ್ಮಿಗಳ ಅಮಾನವೀಯ ಕೃತ್ಯಕ್ಕೆ ರೈತ ಕುಟುಂಬದ ಬದುಕು ಭಸ್ಮವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಾಲ್ವರು ದುಷ್ಕರ್ಮಿಗಳು ಡೀಸೆಲ್ ಹಾಗೂ ಪೆಟ್ರೋಲ್ ಸುರಿದು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಆರೋಪ‌‌‌‌ ಕೇಳಿ ಬಂದಿದೆ.

ಅತ್ತಿಕಟ್ಟಿ ಗ್ರಾಮದ ಗಣೇಶ ಹಾಗೂ ಗೋಪಿ ಚವ್ಹಾಣ ಎಂಬ ಸಹೋದರರು ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿದ್ದರು. ತಮ್ಮ ಬಳಿ ಕೇವಲ 6 ಎಕರೆ ಜಮೀನು ಇದ್ದರೂ, ಇತರ ರೈತರ ಜಮೀನನ್ನು ಲವಣಿಗೆ ಪಡೆದು ಸುಮಾರು 100 ಎಕರೆ ಪ್ರದೇಶದಲ್ಲಿ ಈ ಬಾರಿ ಸಮೃದ್ಧವಾಗಿ ಮೆಕ್ಕೆಜೋಳ ಬೆಳೆದಿದ್ದರು. ಬೆಳೆದ ಮೆಕ್ಕೆಜೋಳವನ್ನು ಗ್ರಾಮದ ಹೊರವಲಯದಲ್ಲಿ ರಾಶಿ ಮಾಡಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದರು.

ಆದರೆ ನಾಲ್ವರು ಮುಸುಕುಧಾರಿಗಳು ಬಂದು ಡೀಸೆಲ್ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಕ್ಷಣಾರ್ಧದಲ್ಲಿ ಬೆಂಕಿ ರುದ್ರನರ್ತನ ತೋರಿದೆ. ಧಗಧಗ ಹೊತ್ತಿ ಉರಿದ ಮೆಕ್ಕೆಜೋಳವನ್ನು ಉಳಿಸಿಕೊಳ್ಳಲು ರೈತ ಕುಟುಂಬ, ಗ್ರಾಮಸ್ಥರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಕೆಲವೇ ನಿಮಿಷಗಳಲ್ಲಿ ಮೆಕ್ಕೆಜೋಳದ ರಾಶಿ ಸಂಪೂರ್ಣವಾಗಿ ಸುಟ್ಟು ಕರಲಾಗಿದೆ.

ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಆದರೂ ಅಷ್ಟರಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಭಸ್ಮವಾಗಿತ್ತು. ಈ ದೃಶ್ಯ ಕಂಡು ರೈತ ಕುಟುಂಬ ಕಣ್ಣೀರಿಟ್ಟಿದ್ದು, ಸ್ಥಳದಲ್ಲಿದ್ದವರ ಮನಕಲಕುವಂತಾಗಿತ್ತು.

ಮೆಕ್ಕೆಜೋಳ ಸುಟ್ಟಿದ್ದನ್ನು ಕಂಡು ರೈತ ಕುಟುಂಬದ ಸದಸ್ಯರು ಬೆಂಕಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ. ಸ್ಥಳೀಯರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಿದ್ದಾರೆ.

ಗೋವಾದಲ್ಲಿ ಕೆಲಸ ಮಾಡಿ ಸಂಗ್ರಹಿಸಿದ ಹಣ ಹಾಗೂ ಸುಮಾರು 60 ರಿಂದ 70 ಲಕ್ಷ ರೂಪಾಯಿ ಸಾಲ ಮಾಡಿ ಕೃಷಿ ಆರಂಭಿಸಿದ್ದ ಸಹೋದರರ ಬದುಕು ಈ ಕೃತ್ಯದಿಂದ ಸಂಪೂರ್ಣವಾಗಿ ಮೂರಾಮಟ್ಟೆಯಾಗಿದೆ.

ಘಟನೆಯ ಬಳಿಕ ಸ್ಥಳಕ್ಕೆ ಎಸ್‌ಒಸಿಓ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಹಶಿಲ್ದಾರ್ ಹಾಗೂ ಮುಂಡರಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ. ಸ್ಥಳೀಯರ ಪ್ರಕಾರ ನಾಲ್ವರು ಮುಸುಕುಧಾರಿಗಳು ಬೆಂಕಿ ಹಚ್ಚಿರುವುದನ್ನು ಕಂಡಿದ್ದರೂ, ಅವರು ಪರಾರಿಯಾಗಿದ್ದಾರೆ.

ಘಟನೆಯ ವಿರುದ್ಧ ಗ್ರಾಮಸ್ಥರು ಹಾಗೂ ರೈತ ವರ್ಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಂಪೂರ್ಣ ನಷ್ಟ ಅನುಭವಿಸಿರುವ ರೈತ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ನ್ಯಾಯ ಸಿಗದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ರೈತ ಕುಟುಂಬ ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದು, ಈ ಘಟನೆ ಇಡೀ ಜಿಲ್ಲೆಯ ರೈತ ವಲಯವನ್ನು ಬೆಚ್ಚಿಬೀಳುವಂತೆ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande