
ಬೆಂಗಳೂರು, 19 ಜನವರಿ (ಹಿ.ಸ.) :
ಆ್ಯಂಕರ್ : ಹಿರಿಯ ಐಪಿಎಸ್ ಅಧಿಕಾರಿ ಹಾಗೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ರಾಮಚಂದ್ರ ರಾವ್ ಅವರ ವಿರುದ್ಧದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ಪೊಲೀಸ್ ಇಲಾಖೆಗೆ ಮುಜುಗರ ಉಂಟು ಮಾಡಿದೆ.
ಪೊಲೀಸ್ ಸಮವಸ್ತ್ರ ಧರಿಸಿರುವ ಸ್ಥಿತಿಯಲ್ಲಿ ಕಚೇರಿ ಒಳಗೇ ಮಹಿಳೆಯೊಂದಿಗಿನ ಅನುಚಿತ ವರ್ತನೆ ಕಂಡು ಬರುತ್ತದೆ ಎನ್ನಲಾಗಿರುವ ಈ ವಿಡಿಯೋ, ಸುಮಾರು ಒಂದು ವರ್ಷದ ಹಿಂದಿನದ್ದು ಎಂದು ಹೇಳಲಾಗುತ್ತಿದೆ. ವಿಡಿಯೋ ಸತ್ಯಾಸತ್ಯತೆ ಕುರಿತು ಸ್ಪಷ್ಟತೆ ಇಲ್ಲದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಪ್ರಕರಣವು ಇತ್ತೀಚೆಗೆ ಬೆಳಕಿಗೆ ಬಂದಿರುವ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ರನ್ಯಾ ರಾವ್ ಮಲ ತಂದೆಯಾಗಿರುವ ರಾಮಚಂದ್ರರಾವ್ ಅವರಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ದುರುಪಯೋಗವಾಗಿದೆ ಎಂಬ ಆರೋಪಗಳ ಹಿನ್ನೆಲೆ, ರಾಮಚಂದ್ರ ರಾವ್ ಅವರ ಪಾತ್ರದ ಕುರಿತು ಈಗಾಗಲೇ ಗೃಹ ಇಲಾಖೆ ತನಿಖೆಗೆ ಆದೇಶಿಸಿತ್ತು.
ಆರೋಪಗಳನ್ನು ತಳ್ಳಿಹಾಕಿದ ಡಿಜಿಪಿ
ವೈರಲ್ ವಿಡಿಯೋ ಕುರಿತು ಗೃಹ ಸಚಿವರಗೆ ಮಾಹಿತಿ ನೀಡಲು ಸಚಿವರ ಮನೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಜಿಪಿ ರಾಮಚಂದ್ರ ರಾವ್ ಅವರು, ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ವಿಡಿಯೋವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ನಕಲಿ ದೃಶ್ಯವಾಗಿದ್ದು, ತಮ್ಮ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಕಾನೂನು ಸಲಹೆ ಪಡೆದು ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪ್ರತಿಕ್ರಿಯೆ
ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
“ಯಾವುದೇ ಉನ್ನತಾಧಿಕಾರಿಯೂ ಕಾನೂನಿಗಿಂತ ಮೇಲಲ್ಲ. ತನಿಖೆಯಲ್ಲಿ ತಪ್ಪು ಸಾಬೀತಾದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆ. ರಾಮಚಂದ್ರ ರಾವ್ – ಹಿನ್ನೆಲೆ
ಕೆ. ರಾಮಚಂದ್ರ ರಾವ್ ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
2023ರಲ್ಲಿ ಡಿಜಿಪಿ ಹುದ್ದೆಗೆ ಬಡ್ತಿ ಪಡೆದ ಅವರು ನಂತರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು.
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಹಿನ್ನೆಲೆಯಲ್ಲಿ, ಪೊಲೀಸರ ಸವಲತ್ತುಗಳ ದುರುಪಯೋಗ ಆರೋಪದಡಿ ಮಾರ್ಚ್ 2025ರಲ್ಲಿ ಅವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು. ಆದರೆ ಪ್ರಕರಣದಲ್ಲಿ ಅವರ ವಿರುದ್ಧ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪುನಃ ಕರ್ತ್ಯವಕ್ಕೆ ಹಾಜರಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa