
ವಿಜಯಪುರ, 17 ಜನವರಿ (ಹಿ.ಸ.) :
ಆ್ಯಂಕರ್ : ಆರೋಗ್ಯ ಇಲಾಖೆ,ಸರ್ವ ಶಿಕ್ಷಣ ಅಭಿಯಾನ, ಕೌಶಲ್ಯಾಭಿವೃದ್ಧಿ ಇಲಾಖೆ, ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರಧಾನಮಂತ್ರಿ ಆವಾಸ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಯಡಿಯ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡುವ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜರುಗಿದ ಕೇಂದ್ರ ಸರ್ಕಾರದ ಯೋಜನೆಗಳ 3ನೇ ತ್ರೈಮಾಸಿಕದ ಡಿಸೆಂಬರ್ ಮಾಹೆಯ ಅಂತ್ಯದವರೆಗಿನ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಪುರಸ್ಕೃತ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ,ಬಿಡುಗಡೆ ಅನುದಾನ ಬಳಸಿ, ಗುರಿ ಸಾಧಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಲಜೀವನ ಮಿಷನ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು.ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ರಸ್ತೆಯನ್ನು ಕಾಮಗಾರಿ ಪೂರ್ಣಗೊಂಡ ನಂತರ ಹಾಗೆ ಬಿಡದೇ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು. ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ನಂತರವೇ ಟೆಂಡರ್ ದಾರರಿಗೆ ಹಣ ಪಾವತಿಸಲು ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ಶೇ.92ರಷ್ಟು ಪ್ರಗತಿ ಸಾಧಿಸಲಾಗಿದ್ದು, ಸ್ವಚ್ಚ ಹಾಗೂ ನೈರ್ಮಲ್ಯ ಕುರಿತಾಗಿ ಜಾಗೃತಿ ಅಭಿಯಾನ ಕೈಗೊಳ್ಳಬೇಕು.ಜಲಧಾರೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆಯಡಿಯ ಜಲಾನಯನ ಅಭಿವೃದ್ಧಿ ಘಟಕ-2.0ದಡಿ ಕೈಗೊಂಡಿರುವ ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕಿನ ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಚಟುವಟಿಕೆಗಳು,ನೀರು ಸಂರಕ್ಷಣಾ ರಚನೆಗಳು, ಖುಷ್ಕಿ ತೋಟಗಾರಿಕಾ,ಅರಣ್ಯೀಕರಣ, ದುರ್ಬಲ ವರ್ಗದವರಿಗೆ ಜೀವನೋಪಾಯ ಚಟುವಟುಕೆಗಳಡಿ ಶೇ.94ಪ್ರಗತಿ ಸಾಧಿಸಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ಸಾಧಿಸುವಂತೆ ಸೂಚಿಸಲಾಯಿತು.
ಸಮಗ್ರ ಶಿಕ್ಷಣ ಅಭಿಯಾನದಡಿ ನಿಗದಿತ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಂತೆ ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಅದರಂತೆ,ಸಣ್ಣ ಅತಿ ಸಣ್ಣ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವರ್ಗದವರಿಗೆ ಪ್ರಧಾನ ಮಂತ್ರಿ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ ಸೆಟ್ ಅಳವಡಿಸಿಕೊಳ್ಳಲು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲತೆ ಹೊಂದುವತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಪಿ ಎಂ ಕುಸುಮ ಬಿ ಯೋಜನೆಯಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ಅಳವಡಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ, 10 ಎಚ್.ಪಿ ಸಾಮರ್ಥ್ಯದವರೆಗೆ ಸ್ವತಂತ್ರವಾಗಿ ಸೌರಚಾಲಿತ ಮೋಟಾರ್ ಗಳನ್ನು ಅಳವಡಿಸುವ ಯೋಜನೆಯಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 30 ಹಾಗೂ ರಾಜ್ಯ ಸರ್ಕಾರ ಶೇ.50 ಸಹಾಧನ ಲಭ್ಯವಿದ್ದು, ಉಳಿದ ಶೇ.20 ರಷ್ಟು ರೈತರು ವಂತಿಕೆ ಭರಿಸಬೇಕಾಗುತ್ತಿದೆ.
ಸೋಲಾರ್ ಪೆನಲ್ ನೊಂದಿಗೆ ಮೋಟಾರ್, ಸ್ಟಾರ್ಟರ್, ಕೇಬಲ್ ಮತ್ತು ಪೈಪ್‌ಗಳನ್ನು ಪೂರೈಸಲಾಗುವುದು.
ಪಿಎಂ ಸೂರ್ಯಘರ್ ಮುಕ್ತ ಬಿಜಲಿ ಯೋಜನೆಯಡಿ ಗ್ರಾಹಕರು ವಿದ್ಯುತ್ ಉತ್ಪಾದಿಸಿ ಬಳಸಲು ಅನುಕೂಲ ಒದಗಿಸಿದೆ. ವಿದ್ಯುತ್ ಬಿಲ್ ಉಳಿತಾಯ, ಹೆಚ್ಚುವರಿ ವಿದ್ಯುತ್ತನ್ನು ಹೆಸ್ಕಾಂಗೆ ಪೂರೈಸಿ ಹಣ ಸಂಪಾದನೆ ಮಾಡಬಹುದಾಗಿದೆ.
ಈ ಯೋಜನ ಕಡಿಮೆ ಬಂಡವಾಳ ವೆಚ್ಚದಲ್ಲಿ ವಸತಿ ಮನೆಗಳ ಮೇಲ್ಚಾವಣಿಯನ್ನು ಬಳಸಿಕೊಳ್ಳಬಹುದಾಗಿದೆ ಸಹಾಯಧನವು ಲಭ್ಯವಿದೆ ಎಂದು ಹೆಸ್ಕಾಂನ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ ಸಭೆಗೆ ಮಾಹಿತಿ ನೀಡಿದರು.
ಫಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮದಡಿಯಲ್ಲಿ ಈ ತಿಂಗಳಲ್ಲಿ ಶೇಕಡ 91 ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಲಸಿಕಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ 91% ರಷ್ಟು ಲಸಿಕಾ ನೀಡಿ ಗುರಿ ಹೊಂದಲಾಗಿದೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಏಪ್ರಿಲ್ 25 ರಿಂದ ಡಿಸೆಂಬರ್ 25ರ ಅಂತ್ಯದ ವರೆಗೆ ಒಟ್ಟು 1022738 ಜನರಿಗೆ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಲಿಂಕ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ಸಂಪತ ಗುಣಾರಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ ಮಾತನಾಡಿ,ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜನಪರ ಕಳಕಳಿ ಹೊಂದಿ, ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡು, ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಯೋಜನೆಯ ಲಾಭ ಜನರಿಗೆ ತಲುಪಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ,ಜಿಲ್ಲೆಯ
ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ, ಜಲಮೂಲಗಳ ಸಂರಕ್ಷಣೆ, ಅಂರ್ತಜಲ ವೃದ್ಧಿ, ನೀರಿನ ತೊಟ್ಟಿಗಳ ನವೀಕರಣ, ಕೊಳವೆ ಬಾವಿಗಳ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಅಭಿವೃದ್ಧಿ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನದ ಜಲ ಸಂಚಯ–ಜನ ಭಾಗಿದಾರಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಜಯಪುರ ಜಿಲ್ಲಾ ಪಂಚಾಯತಿಗೆ 25 ಲಕ್ಷ ರೂ. ನಗದೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮಹತ್ವಾಕಾಂಕ್ಷೆ ತಾಲೂಕು ಯೋಜನೆಯಡಿ ಆಯ್ಕೆಯಾದ ತಾಳಿಕೋಟೆ ತಾಲೂಕಿನಲ್ಲಿ ಈ ಅಭಿಯಾನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನೀತಿ ಆಯೋಗದಿಂದ ಔಪಚಾರಿಕ ಮನ್ನಣೆ ದೊರೆತಿದ್ದು, ಅನುಷ್ಠಾನದಲ್ಲಿ ಶ್ರೇಷ್ಠತೆಗಾಗಿ ತಾಳಿಕೋಟಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಮತ್ತು ವಿಜಯಪುರ ಜಿಲ್ಲಾಡಳಿತಕ್ಕೆ ಚಿನ್ನದ ಪದಕ ಮತ್ತು ಪ್ರಮಾಣಪತ್ರ ಲಭಿಸಿದ್ದು, ಕೇಂದ್ರ ಹಾಗೂ ರಾಜ್ಯ ಪುರಷ್ಕೃತ ಯೋಜನೆಗಳನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕಾಲಕಾಲಕ್ಕೆ ಸಭೆ ನಡೆಸಿ, ಸಲಹೆ ಸೂಚನೆ ಪ್ರಗತಿ ಸಾಧಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ ಉರ್ಜಾ ಸುರಕ್ಷಾ ಮತ್ತು ಉತ್ತಾನ ಮಹಾಭಿಯಾನ, ಪ್ರಧಾನ ಮಂತ್ರಿ ಕಿಸಾನ ಉರ್ಜಾ ಸುರಕ್ಷಾ ಮತ್ತು ಉತ್ತಾನ ಮಹಾಭಿಯಾನ, ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ,ಪ್ರಧಾನ ಮಂತ್ರಿ ಉಜ್ವಲಾ ಯೋಜನೆ, ಭೇಟಿ ಬಚಾವೋ ಭೇಟಿ ಪಡಾವೋ, ಲೋಕ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ತೋಟಗಾರಿಕೆ ಇಲಾಖೆ,ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೃಷಿ ಇಲಾಖೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ,ಕೃಷಿ ಯಾಂತ್ರೀಕರಣ ಉಪ ಅಭಿಯಾನ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮಡಿವಾಳಪ್ಪ ಕರಡಿ,ದಿಶಾ ಸಮಿತಿಯ ಸದಸ್ಯರಾದ ರವಿಕಾಂತ, ಸುನೀಲ, ಶ್ರೀಮತಿ ಭಾಗವ್ವ ಮಾದರ,ಶ್ರೀಮತಿ ಸುಮಂಗಲಾ, ಕಾಶೀರಾಯಗೌಡ ಬಿರಾದಾರ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೇರಿದಂತೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande