




ಬಳ್ಳಾರಿ, 17 ಜನವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಗಲಾಟೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಶಾಸಕ ನಾರಾ ಭರತರೆಡ್ಡಿ ಅವರನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಬಿಜೆಪಿಯು ಬಳ್ಳಾರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶ ಯಶಸ್ವಿಯಾಗಿ ನೆರವೇರಿತು.
ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ನಡೆದ ಪ್ರತಿಭಟನಾ ಸಮಾವೇಶವನ್ನು ಕಹಳೆ ಊದಿ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು, ವಾಲ್ಮೀಕಿ ಸಮಾಜಕ್ಕೆ ಬಿಜೆಪಿ ನೀಡಿರುವ ಕೊಡುಗೆ ಮಹತ್ತರವಾದದ್ದು.
ಕಾಂಗ್ರೆಸ್ ವಾಲ್ಮೀಕಿ ಸರ್ಕಾರಕ್ಕೆ ಯಾವ ಕೊಡುಗೆ ನೀಡಿದೆ? ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಸಮಾಜಕ್ಕೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಾರಂಭಿಸಿದೆ. ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದೆ. ವಾಲ್ಮೀಕಿಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದೆ. ಹೀಗೇ ಅನೇಕ ಜನಪರ ನಿರ್ಧಾರಗಳನ್ನು ಕೈಗೊಂಡಿದ್ದು, ಬಿಜೆಪಿ ಸರ್ಕಾರ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿಗಳಿಗೆ ವಂಚಿಸಿದೆ. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿ. ಕರ್ನಾಟಕದಲ್ಲಿ ಪೊಲೀಸ್ ವಿಫಲವಾಗಿದೆ. ನಮ್ಮ ಬಿ. ಶ್ರೀರಾಮುಲು ಮತ್ತು ಜಿ. ಜನಾರ್ದನರೆಡ್ಡಿ ಅವರು ನಡೆಸಲು ಉದ್ದೇಶಿಸಿರುವ `ಬಳ್ಳಾರಿ ಟು ಬೆಂಗಳೂರು' ಪಾದಯಾತ್ರೆಯನ್ನು ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.
ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು, ಬ್ಯಾನರ್ ಗಲಾಟೆಯಲ್ಲಿ ಮೃತ ರಾಜಶೇಖರರೆಡ್ಡಿಯ ಸಂತ್ರಸ್ತ ತಾಯಿಗೆ ಕಾಂಗ್ರೆಸ್ ಸರ್ಕಾರದಿಂದ ನ್ಯಾಯ ಸಿಗುವುದಿಲ್ಲ.
ಈ ಗಲಭೆಯಲ್ಲಿ ಪೊಲೀಸ್ ವೈಫಲ್ಯ ಸ್ಪಷ್ಟವಾಗಿದೆ. ಗೃಹ ಸಚಿವರು ವಿಧಾನಸಭೆಯಲ್ಲಿ ಉತ್ತರ ನೀಡಲಷ್ಟೇ ಸೀಮಿತರಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಶಾಸಕ ನಾರಾ ಭರತರೆಡ್ಡಿಗೆ ಬೆಂಬಲ ನೀಡಿದ್ದಾರೆ. ವಿಧಾನಸಭೆಯಲ್ಲಿ ಈ ಗಲಭೆಯ ಚರ್ಚೆಗೆ ಬಿಜೆಪಿ ಪಟ್ಟು ಹಿಡಿಯಲಿದೆ. ಬಿಜೆಪಿ ಬಿ. ಶ್ರೀರಾಮುಲು ಮತ್ತು ಜಿ. ಜನಾರ್ದನರೆಡ್ಡಿ ಅವರ ಬೆನ್ನಿಗಿದೆ ಎಂದರು.
ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಗಾಲಿ ಬ್ರದರ್ಸ್‍ನ ಸಣ್ಣ ಗಲಾಟೆಯ ಕಾರಣ ನಾರಾ ಭರತರೆಡ್ಡಿ ಶಾಸಕರಾಗಿದ್ದು, ಗಾಲಿ ಬ್ರದರ್ಸ್ ಒಂದಾಗಿದ್ದಾರೆ. ಬಳ್ಳಾರಿ ಸೇರಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ಸಿಗರಲ್ಲಿ ಗೂಂಡಾ ವರ್ತನೆ ಹೆಚ್ಚಾಗಿದೆ. ವಾಲ್ಮೀಕಿ ಹೆಸರಲ್ಲಿ ರಾಜಕೀಯ ಮಾಡಿ, ಗಲಾಟೆ ಸೃಷ್ಠಿಸಿದೆ. ಗಲಭೆಯ ನೆಪದಲ್ಲಿ ಶಾಸಕ ಜಿ. ಜನಾರ್ದನ ರೆಡ್ಡಿ ಕೊಲೆಯ ಸಂಚು ನಡೆದಿತ್ತು ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಬಳ್ಳಾರಿಯಲ್ಲಿ ಬಿ. ಶ್ರೀರಾಮುಲು ವೇಗ, ಜಿ. ಜನಾರ್ದನ ರೆಡ್ಡಿಯ ಶಕ್ತಿ ಒಗ್ಗೂಡಿದೆ. ಬಿಜೆಪಿಯಲ್ಲಿ ಹೊಸ ಹುರುಪು ಮೂಡಿದೆ.
ವಾಲ್ಮೀಕಿ ಜನಾಂಗದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡಿದೆ. ವಾಲ್ಮೀಕಿ ಸಮಾಜಕ್ಕೆ ಯಾವ ಪಕ್ಷ ಹೆಚ್ಚಿನ ಸೌಲಭ್ಯಗಳನ್ನು ನೀಡಿದೆ ಎನ್ನುವ ಕುರಿತು ಕಾಂಗ್ರೆಸ್ ಚರ್ಚೆಗೆ ಬರಲಿ. ಯುವಕ ರಾಜಶೇಖರರೆಡ್ಡಿ ಅವರ ಸಾವಿಗೆ ಕಾರಣರಾದವರ ಶಿಕ್ಷೆಗಾಗಿ ಬಿಜೆಪಿ ಹೋರಾಡಲಿದೆ ಎಂದರು.
ಸಂಸದ ಗೋವಿಂದ ಕಾರಜೋಳ ಅವರು, ಶಾಸಕ ನಾರಾ ಭರತರೆಡ್ಡಿಯವರನ್ನು ಸರ್ಕಾರ ತಕ್ಷಣವೇ ಬಂಧಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು, ನಾನು ಕಪ್ಪುಚುಕ್ಕೆ ಇಲ್ಲದೇ ಆಡಳಿತ ನಡೆಸಿದ್ದು, ಭರತ್ ನನಗೇ ಏಕವಚನದಲ್ಲಿ ಮಾತನಾಡುತ್ತಾನೆ. ಸಂಸ್ಕಾರ ಇಲ್ಲದ ಭರತ್, ರಾಜ್ಯದಲ್ಲಿ ದೊಡ್ಡ ವ್ಯಕ್ತಿಯಾಗಲು ಬೇರೊಬ್ಬರ ಮನೆಯ ಮುಂದೆ ಹೋಗಿ ಗುಂಡು ಹಾರಿಸಿದ್ದಾನೆ. ನನ್ನನ್ನು - ನನ್ನ ರಾಜಕೀಯವನ್ನು ಮುಗಿಸಲಿಕ್ಕಾಗಿ ಅಮಾಯಕ ಯುವಕನನ್ನು ಬಲಿ ತೆಗೆದುಕೊಂಡಿರುವ ಭರತ್ ರೆಡ್ಡಿಯನ್ನು ತಕ್ಷಣವೇ ಬಂಧಿಸಬೇಕು ಎಂದರು.
ಶಾಸಕ ಜಿ. ಜನಾರ್ದನರೆಡ್ಡಿ ಅವರು, ಬ್ಯಾನರ್ ಗಲಾಟೆಗೆ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಮತ್ತು ಅಡಿಷನಲ್ ಎಸ್ಪಿ ಕೆ.ಪಿ. ರವಿಕುಮಾರ್ ಕಾರಣವಾಗಿದ್ದು, ಇವರನ್ನು ತಕ್ಷಣವೇ ಅಮಾನತುಗೊಳಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಶಾಸಕ ಭರತರೆಡ್ಡಿಯನ್ನು ಬಂಧಿಸಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ನಾನು ಹೋರಾಡುತ್ತಿರುವೆ ಎಂದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು, ಶಾಸಕ ನಾರಾ ಭರತರೆಡ್ಡಿ ಭಸ್ಮಾಸುರ. ಈ ಗೂಂಡಾ ಶಾಸಕ ನಾರಾ ಭರತರೆಡ್ಡಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕಪಾಠವನ್ನು ಕಲಿಸಲಿದ್ದಾರೆ ಎಂದರು.
ನಾಯಕಿ ಲಕ್ಷ್ಮಿ ಅರುಣಾ ಅವರು, ಬಳ್ಳಾರಿಯ ರೌಡಿ ಶಾಸಕನ ಹೆಸರೇಳಲು ನನಗೆ ಅಸಹ್ಯವಾಗುತ್ತದೆ. ಈ ಶಾಸಕನ ತಂದೆ ನಾರಾ ಸೂರ್ಯನಾರಾಯಣರೆಡ್ಡಿ ಅವರು ಗ್ರಾನೈಟ್ ವ್ಯವಹಾರದಲ್ಲಿ ಮಹಿಳೆಯರನ್ನು ಮೋಸ ಮಾಡಿ, ಹಣ ಸಂಪಾದನೆ ಮಾಡಿ, ನಗರದಲ್ಲಿ ಮಟಕಾ, ಇಸ್ಪೇಟ್ ಇನ್ನಿತರೆ ಅಕ್ರಮ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಿ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರದರ್ಶನ
ಬ್ಯಾನರ್ ಗಲಾಟೆಯ ವೀಡಿಯೋಗಳನ್ನು ವೇದಿಕೆಯ ಹಿಂಭಾಗದ ಬ್ಯಾಕ್‍ಡ್ರಾಪ್‍ನಲ್ಲಿ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ನಡೆಯಿತು.
ಮಾಜಿ ಸಚಿವ ಜಿ. ಕರುಣಾಕರರೆಡ್ಡಿ, ಮುಖಂಡರಾದ ಸಣ್ಣ ಫಕ್ಕೀರಪ್ಪ, ಬಸವರಾಜ್ ದಡೇಸೂಗೂರು, ಅವ್ವಾರು ಮಂಜುನಾಥ್, ಪಿ. ಪಾಲಣ್ಣ, ಕೆ.ಎಂ. ಮಹೇಶ್ವರಸ್ವಾಮಿ, ಎಸ್. ಮಲ್ಲನಗೌಡ ಇನ್ನಿತರರು ವೇದಿಕೆಯಲ್ಲಿದ್ದರು.
ಕನಕ ದುರ್ಗಮ್ಮ ದರ್ಶನ
ಬಿ.ವೈ. ವಿಜಯೇಂದ್ರ ಅವರು ಬಳ್ಳಾರಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್