
ಬೆಂಗಳೂರು, 16 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಗಿಲೆನ್–ಬಾರಿ ಸಿಂಡ್ರೋಮ್ (GBS) ಎಂಬ ಗಂಭೀರ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಜಿಬಿಎಸ್ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಹಾಗೂ ದುಬಾರಿಯಾದ ‘ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಥೆರಪಿಯನ್ನು ಇದೀಗ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ (AB PMJAY–CM’s ArK) ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆ ಹೊರಡಿಸಲಾಗಿದೆ.
ಸುತ್ತೋಲೆಯ ಪ್ರಕಾರ, ಈ ಹಿಂದೆ ಜಿಬಿಎಸ್ ಕಾಯಿಲೆಗೆ ನೀಡಲಾಗುತ್ತಿದ್ದ ಮೂಲ ಚಿಕಿತ್ಸೆಯ ಜೊತೆಗೆ ಇದೀಗ ಅತ್ಯವಶ್ಯಕವಾದ IVIG ಥೆರಪಿಯನ್ನೂ ಯೋಜನೆಯಡಿ ಒಳಪಡಿಸಲಾಗಿದೆ. ಈ ಚಿಕಿತ್ಸೆಗೆ ವಿಶೇಷ ಪ್ರೊಸೀಜರ್ ಕೋಡ್‌ಗಳಾಗಿ 2B.M1.00061D ಮತ್ತು 2B.M1.00061E ಅನ್ನು ನಿಗದಿಪಡಿಸಲಾಗಿದೆ.
ಪ್ರತಿ ರೋಗಿಗೆ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸಾ ವೆಚ್ಚವನ್ನು ಯೋಜನೆಯಡಿ ಭರಿಸಲಾಗುತ್ತದೆ. IVIG ಔಷಧಿಯ ದರವನ್ನು ಪ್ರತಿ ಗ್ರಾಂಗೆ 2,000 ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ರೋಗಿಯ ತೂಕದ ಆಧಾರದ ಮೇಲೆ ಡೋಸೇಜ್ ನೀಡುವಂತೆ ಸೂಚಿಸಲಾಗಿದೆ.
ಯೋಜನೆಯ ಪಾರದರ್ಶಕತೆ ಮತ್ತು ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡುವಾಗ ಬಳಸಿದ ಔಷಧಿಯ ಬಾಟಲಿ (Vial), ಅದರ ಬ್ಯಾಚ್ ಸಂಖ್ಯೆ, ರೋಗಿಯ ಹೆಸರಿರುವ ಫೋಟೋ ಹಾಗೂ ವೈದ್ಯರು ದೃಢೀಕರಿಸಿದ ಡೋಸೇಜ್ ವಿವರಗಳನ್ನು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ.
ಈ ಸೌಲಭ್ಯವು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಯೋಜನೆಯಡಿ ನೋಂದಾಯಿತವಾಗಿರುವ (Empanelled) ಖಾಸಗಿ ಆಸ್ಪತ್ರೆಗಳಲ್ಲಿಯೂ ಲಭ್ಯವಿರಲಿದೆ.
ಬಡ ಮತ್ತು ಸಾಮಾನ್ಯ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಬದ್ಧತೆಯಾಗಿದ್ದು, ನರರೋಗಕ್ಕೆ ಸಂಬಂಧಿಸಿದ ಈ ಕಠಿಣ ಹಾಗೂ ದುಬಾರಿ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವ ಮೂಲಕ ಸಾವಿರಾರು ರೋಗಿಗಳಿಗೆ ನೆರವಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa