ದೆಹಲಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು, 16 ಜನವರಿ (ಹಿ.ಸ.) : ಆ್ಯಂಕರ್: ಕಾಂಗ್ರೆಸ್‌ ಪಕ್ಷದೊಳಗಿನ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ನಡುವೆಯೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ. ಈ ಭೇಟಿ ಕೇವಲ ಪಕ್ಷದ ಸಂಘಟನಾ ಕಾರ್ಯಕ್ಕೆ ಸೀಮಿತವಲ್
Dks


ಬೆಂಗಳೂರು, 16 ಜನವರಿ (ಹಿ.ಸ.) :

ಆ್ಯಂಕರ್: ಕಾಂಗ್ರೆಸ್‌ ಪಕ್ಷದೊಳಗಿನ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ನಡುವೆಯೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ.

ಈ ಭೇಟಿ ಕೇವಲ ಪಕ್ಷದ ಸಂಘಟನಾ ಕಾರ್ಯಕ್ಕೆ ಸೀಮಿತವಲ್ಲದೆ, ರಾಜ್ಯ ಕಾಂಗ್ರೆಸ್‌ನೊಳಗಿನ ರಾಜಕೀಯ ಗೊಂದಲಗಳ ಹಿನ್ನೆಲೆ ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು.

ಈ ವೇಳೆ ಅಧಿಕಾರ ಹಂಚಿಕೆ ಕುರಿತ ವಿಚಾರ ಪ್ರಸ್ತಾಪವಾದಾಗ, “ವಿಮಾನ ನಿಲ್ದಾಣದಲ್ಲಿ ಚರ್ಚೆ ಬೇಡ, ದೆಹಲಿಗೆ ಬನ್ನಿ” ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳ ವಿಧಾನ ಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ನಾಯಕರ ಮಹತ್ವದ ಸಭೆ ದೆಹಲಿಯಲ್ಲಿ ನಡೆಯಲಿದ್ದು, ಅಸ್ಸಾಂ ಚುನಾವಣೆಗೆ ವೀಕ್ಷಕರಾಗಿರುವ ಡಿ.ಕೆ. ಶಿವಕುಮಾರ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಆದರೆ ಚುನಾವಣಾ ಜವಾಬ್ದಾರಿ ಕೇವಲ ಅಧಿಕೃತ ಕಾರಣವಾಗಿದ್ದು, ರಾಜ್ಯ ಕಾಂಗ್ರೆಸ್‌ನೊಳಗಿನ ಅಧಿಕಾರ ಹಂಚಿಕೆ ವಿಚಾರವೇ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿಯ ಪ್ರಮುಖ ಉದ್ದೇಶ ಎನ್ನಲಾಗುತ್ತಿದೆ.

ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳಲಿರುವುದರಿಂದ, ಅದಕ್ಕೂ ಮುನ್ನವೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಪ್ರಸ್ತಾಪಿಸುವ ಯತ್ನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ನಾನು ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಪಕ್ಷದ ಎಲ್ಲ ನಾಯಕರನ್ನು ಭೇಟಿಯಾಗುತ್ತೇನೆ. ರಾಹುಲ್ ಗಾಂಧಿಯನ್ನು ಭೇಟಿಯಾಗುವುದು ಹೊಸದೇನಲ್ಲ. ಆದರೆ ಇಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande