ಯುವಜನಾಂಗ ಸಾಹಿತ್ಯ–ಸಂಸ್ಕೃತಿಯ ಅಭಿರುಚಿ ಬೆಳೆಸಿಕೊಳ್ಳಬೇಕು : ವಿವೇಕಾನಂದಗೌಡ ಪಾಟೀಲ
ಗದಗ, 14 ಜನವರಿ (ಹಿ.ಸ.) : ಆ್ಯಂಕರ್ : ಸಾಹಿತ್ಯ ಹಾಗೂ ಸಂಸ್ಕೃತಿಯ ವಾರಸುದಾರರಾಗಿರುವ ಯುವಜನಾಂಗ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಸಹೃದಯತೆಯನ್ನು ರೂಪಿಸಿಕೊಳ್ಳಬೇಕು. ಕಲೆ, ಸಾಹಿತ್ಯ, ಸಂಗೀತವಿಲ್ಲದ ಬದುಕು ಪಶು ಸಮಾನ ಎಂಬ ಪ್ರಸಿದ್ಧ ಹೇಳಿಕೆ ಇದೆ. ವಿವಿಧ ಕೃತಿಗಳನ್ನ
ಫೋಟೋ


ಗದಗ, 14 ಜನವರಿ (ಹಿ.ಸ.) :

ಆ್ಯಂಕರ್ : ಸಾಹಿತ್ಯ ಹಾಗೂ ಸಂಸ್ಕೃತಿಯ ವಾರಸುದಾರರಾಗಿರುವ ಯುವಜನಾಂಗ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಸಹೃದಯತೆಯನ್ನು ರೂಪಿಸಿಕೊಳ್ಳಬೇಕು. ಕಲೆ, ಸಾಹಿತ್ಯ, ಸಂಗೀತವಿಲ್ಲದ ಬದುಕು ಪಶು ಸಮಾನ ಎಂಬ ಪ್ರಸಿದ್ಧ ಹೇಳಿಕೆ ಇದೆ. ವಿವಿಧ ಕೃತಿಗಳನ್ನು ಓದುವ ಮೂಲಕ ವಿಶಾಲ ಜಗತ್ತಿಗೆ ತೆರೆದುಕೊಂಡಾಗ ಸಂಕುಚಿತತೆ ಕಡಿಮೆಯಾಗಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಯುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಹಿತ್ಯಾಭಿರುಚಿ ಸಂವಾದ ಹಾಗೂ ಯುವ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಯುವಕರು ಸಮೂಹ ಮಾಧ್ಯಮಗಳಲ್ಲಿ ಹೆಚ್ಚು ಸಮಯ ವ್ಯಯಿಸುವುದು, ಮೊಬೈಲ್ ಗೀಳು, ಪರೀಕ್ಷಾಮುಖ ಶಿಕ್ಷಣ ವ್ಯವಸ್ಥೆ, ಓದಿಗೆ ಪೂರಕವಾಗಿರದ ಕುಟುಂಬ ವಾತಾವರಣ, ಶಿಕ್ಷಣ ಕ್ಷೇತ್ರದಲ್ಲಿ ಇಂಗ್ಲಿಷ್ ಪ್ರಾಬಲ್ಯ, ಪಾಲಕರ ಇಂಗ್ಲಿಷ್ ವ್ಯಾಮೋಹ ಹಾಗೂ ಸಮರ್ಪಕ ಮಾರ್ಗದರ್ಶನದ ಕೊರತೆ ಇತ್ಯಾದಿ ಕಾರಣಗಳಿಂದ ಸಾಹಿತ್ಯದಿಂದ ನಿಧಾನವಾಗಿ ವಿಮುಖರಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆದರೆ ಮತ್ತೊಂದೆಡೆ ಸಮೂಹ ಮಾಧ್ಯಮಗಳನ್ನೇ ಸಾಧನವಾಗಿ ಮಾಡಿಕೊಂಡು ಓದು, ಬರವಣಿಗೆ ಮತ್ತು ಸೃಜನಶೀಲತೆಯಲ್ಲಿ ತೊಡಗಿಕೊಂಡಿರುವ ಯುವಕರೂ ಇದ್ದಾರೆ. ಉತ್ತಮ ಸಾಹಿತ್ಯ ಕೃತಿಗಳನ್ನು ಅಂತರ್ಜಾಲದ ಮೂಲಕ ಪ್ರಚಾರ ಮಾಡಿ ಓದಿನ ಕಡೆಗೆ ಯುವಕರನ್ನು ಸೆಳೆಯುವ ಅಗತ್ಯವಿದೆ ಎಂಬ ಅಭಿಪ್ರಾಯಗಳನ್ನು ಸಂವಾದದಲ್ಲಿ ಎಂ.ಎಸ್. ಹುಲ್ಲೂರ, ವೀರೇಶ ಹರ್ಲಾಪೂರ, ರಾಜೇಶ್ವರಿ ಬಡ್ಡಿ, ಅನುಪ್ರಿಯಾ ಬಾಪುರಿ, ಅನ್ನಪೂರ್ಣ ಕಾಡಣ್ಣವರ ಹಾಗೂ ಮೇಘಾ ಹಾದಿಮನಿ ವ್ಯಕ್ತಪಡಿಸಿದರು.

ನಂತರ ಜರುಗಿದ ಯುವ ಕವಿಗೋಷ್ಠಿಯಲ್ಲಿ ಗಣೇಶ ಪಾಟೀಲ, ಲಕ್ಷ್ಮೀ ಪಾಟೀಲ, ಸಂತೋಷ ಜಿಚ್ಚೇರಿ, ಸಂಗೀತಾ ಜೋಗಿನ, ಅನ್ನಪೂರ್ಣ ಕುರಿ ಹಾಗೂ ಅನಿತಾ ಅರಳಿ ತಮ್ಮ ಕವನಗಳನ್ನು ವಾಚಿಸಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು.

ಯುವ ಸಮೂಹವು ಅಂತರ್ಜಾಲದಲ್ಲಿ ತಮ್ಮನ್ನು ತಾವು ಕಳೆದುಕೊಳ್ಳದೇ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಶ್ರೀಮಂತ ಸಂಸ್ಕೃತಿಯ ಅರಿವನ್ನು ಹೊಂದಿ, ಯುವಕರಲ್ಲಿರುವ ಅಗಾಧ ಶಕ್ತಿ ಮತ್ತು ಸಾಮರ್ಥ್ಯ ವ್ಯಕ್ತಿಯ ಉನ್ನತಿಯ ಜೊತೆಗೆ ದೇಶದ ಪ್ರಗತಿಗೆ ಪೂರಕವಾಗಬೇಕು. ಅಂದಾಗ ಮಾತ್ರ ಸ್ವಾಮಿ ವಿವೇಕಾನಂದರ ಆದರ್ಶಗಳ ನಿಜವಾದ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ವಿವೇಕಾನಂದಗೌಡ ಪಾಟೀಲ ಹೇಳಿದರು.

ಕಾರ್ಯಕ್ರಮಕ್ಕೆ ಅಮರೇಶ ರಾಂಪೂರ ಸ್ವಾಗತಿಸಿ, ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ವಿದ್ಯಾಧರ ದೊಡ್ಡಮನಿ, ಅನ್ನದಾನಿ ಹಿರೇಮಠ, ಶಶಿಕಾಂತ ಕೊರ್ಲಹಳ್ಳಿ, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಕಿಶೋರಬಾಬು ನಾಗರಕಟ್ಟಿ, ಶೈಲಶ್ರೀ ಕಪ್ಪರದ, ಡಿ.ಎಸ್. ಬಾಪುರಿ, ಕೆ.ಎಸ್. ಬಾಳಿಕಾಯಿ, ಎ.ಎಸ್. ಬಸವರಾಜ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಶಿಲ್ಪಾ ಮ್ಯಾಗೇರಿ, ಐಶ್ವರ್ಯ ಧರಣೆಪ್ಪಗೌಡರ, ಪ್ರತಿಭಾ ಪಾಟೀಲ, ಪ್ರೇಮಾ ಕಾಡಣ್ಣವರ, ಎಸ್.ಪಿ. ಗೌಳಿ, ರವಿ ದೇವರಡ್ಡಿ, ಸಾಕ್ಷಿ ದೇವರಡ್ಡಿ, ವಿ.ಎಸ್. ದಿಂಡೂರ, ಅಂದಾನಪ್ಪ ವಿಭೂತಿ, ಸುಧೀರ ಘೋರ್ಪಡೆ, ರಾಮಚಂದ್ರ ಮೋನೆ, ಆನಂದ ಹಡಪದ, ಉಮಾ ಕಣವಿ ಸೇರಿದಂತೆ ಅನೇಕ ಸಾಹಿತಿಗಳು, ಯುವಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande