
ಬೆಂಗಳೂರು, 14 ಜನವರಿ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಜನವರಿ 22ರಿಂದ ಕರೆಯಲು ನಿರ್ಣಯ ಕೈಗೊಳ್ಳಲಾಗಿದೆ. ಜಂಟಿ ಅಧಿವೇಶನವು ಜನವರಿ 31ರವರೆಗೆ ನಡೆಯಲಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 22ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣಕ್ಕೆ ಆಹ್ವಾನ ನೀಡಲು ಸಚಿವ ಸಂಪುಟ ತೀರ್ಮಾನಿಸಿದ್ದು, ರಾಜ್ಯಪಾಲರ ಭಾಷಣದ ಕರಡು ಅನುಮೋದನೆಗೆ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ನೂತನ ವಿಬಿಜಿ ರಾಮ್ ಜಿ ಕಾಯ್ದೆಯು ಸಮಾಜದ ಮೇಲೆ ಬೀರಿರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
ಜನರ ಹಿತ ಮತ್ತು ರಾಜ್ಯದ ಹಿತ ಕಾಪಾಡಲು ಸರ್ಕಾರ ಸೂಕ್ತ ಹೆಜ್ಜೆ ಇಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಜನರ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಸರ್ಕಾರ ಮೌನವಾಗಿ ಸ್ವೀಕರಿಸುವುದಿಲ್ಲ ಎಂದು ಹೆಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು. MNREGA ಕಾಯ್ದೆಯ ಮರುಸ್ಥಾಪನೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಅಧಿವೇಶನದ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.
ವಿಬಿಜಿ ರಾಮ್ ಜಿ ಕಾಯ್ದೆ ಕುರಿತು ಪಂಜಾಬ್, ತಮಿಳುನಾಡು ಸೇರಿದಂತೆ ಆರೇಳು ರಾಜ್ಯಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ ಎಂದು ಸಚಿವರು ತಿಳಿಸಿದರು. ಹಳೆಯ MNREGA ಕಾಯ್ದೆಯಡಿ ಉದ್ಯೋಗ ನೀಡದಿದ್ದರೆ ಫಲಾನುಭವಿಗೆ ಉದ್ಯೋಗ ಭತ್ಯೆ ಕೇಳುವ ಹಕ್ಕು ಇತ್ತು. ಪಂಚಾಯತಿಗಳಿಗೆ ಕಾಮಗಾರಿಗಳ ನಿರ್ಧಾರ ಕೈಗೊಳ್ಳುವ ಅಧಿಕಾರವಿತ್ತು. ಆದರೆ ಹೊಸ ಕಾಯ್ದೆಯಡಿ ಪಂಚಾಯತಿಗಳ ಅಧಿಕಾರ ಕಸಿದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.
ಗ್ರಾಮೀಣ ಆಸ್ತಿ ಸೃಷ್ಟಿಗೆ ಬಳಸಲಾಗುತ್ತಿದ್ದ ಕಾರ್ಮಿಕರನ್ನು ರಸ್ತೆ, ಸುರಂಗ ನಿರ್ಮಾಣದಂತಹ ಗುತ್ತಿಗೆದಾರರ ಕಾಮಗಾರಿಗಳಿಗೆ ನಿಯೋಜಿಸುವ ಉದ್ದೇಶ ಹೊಸ ಕಾಯ್ದೆಯಲ್ಲಿದೆ. ಇದು ಅಧಿಕಾರ ವಿಕೇಂದ್ರೀಕರಣದ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಜನರನ್ನು ಜಾಗೃತಗೊಳಿಸುವುದು, ವಿಶೇಷ ಚರ್ಚೆ ನಡೆಸುವುದು ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ ಕಾನೂನು ನ್ಯಾಯಾಲಯದ ಮೊರೆ ಹೋಗಲೂ ಸರ್ಕಾರ ಸಿದ್ಧವಾಗಿದೆ ಎಂದು ಹೆಚ್.ಕೆ. ಪಾಟೀಲ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಲೆಕ್ಕ ಪರಿಶೋಧನೆಯ ಉದ್ದೇಶವೇ ಅವ್ಯವಹಾರಗಳನ್ನು ಪತ್ತೆಹಚ್ಚುವುದಾಗಿದೆ. ಈ ದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ನರೇಗಾ ಯೋಜನೆಯನ್ನು ಟೀಕಿಸಿದ್ದರೂ, ನಂತರ ಅದನ್ನೇ ಶ್ಲಾಘಿಸಿದ್ದಾರೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa