
ಚಿತ್ರದುರ್ಗ, 13 ಜನವರಿ (ಹಿ.ಸ.);
ಆ್ಯಂಕರ್:ಸರ್ಕಾರದ ಸುತ್ತೋಲೆಗಳನ್ವಯ ರಾಜ್ಯ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಅನಾಮಧೇಯ ಹಾಗೂ ಪೂರಕ ದಾಖಲೆಗಳಿಲ್ಲದ ದೂರುಗಳನ್ನು ಆಧರಿಸಿ ಯಾವುದೇ ತನಿಖೆ ಅಥವಾ ಕ್ರಮ ಕೈಗೊಳ್ಳಬಾರದು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧಾರರಹಿತ ದೂರುಗಳಿಂದ ನೌಕರರ ಆತ್ಮಸ್ಥೈರ್ಯ ಕುಸಿಯುತ್ತಿದ್ದು, ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸಿದರು.
ನೌಕರರ ಸಂಘದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ ಅವರು ಅನಾಮಧೇಯ ದೂರುಗಳಿಗೆ ಮನ್ನಣೆ ನೀಡದಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ಈ ಕುರಿತು ಅಧಿಕಾರಿಗಳಿಗೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ “ಕರ್ನಾಟಕ ಆರೋಗ್ಯ ಸಂಜೀವಿನಿ” ಯೋಜನೆಗೆ ಅಸಹಕಾರ ತೋರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ನೌಕರರ ದೂರುಗಳ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸರ್ಕಾರಿ ನೌಕರರು ಕಾನೂನು ಮತ್ತು ನಿಯಮಗಳ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು, ಆರ್‌ಟಿಐ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಕಳೆದ ಮೂರು ವರ್ಷಗಳಿಂದ ಬಾಕಿಯಿರುವ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ವಿತರಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂಬ ಬೇಡಿಕೆ ಸಭೆಯಲ್ಲಿ ಕೇಳಿಬಂತು.
ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ಶಿಶುಪಾಲನೆ ರಜೆ, ಪ್ರತಿಮಾಸ ಋತುಚಕ್ರ ರಜೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ನೌಕರರಿಗೆ ಗರಿಷ್ಠ 6 ತಿಂಗಳ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಡಿಡಿಒಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa