ಸಪಾಯಿ ಕರ್ಮಚಾರಿಗಳ ಹಕ್ಕು ಸೌಲಭ್ಯಗಳಿಗೆ ಸಂಪೂರ್ಣ ಭದ್ರತೆ: ಡಿಸಿ ಶ್ರೀಧರ
ಗದಗ, 13 ಜನವರಿ (ಹಿ.ಸ.) ಆ್ಯಂಕರ್: ಗದಗ ಜಿಲ್ಲೆಯ ಸಪಾಯಿ ಕರ್ಮಚಾರಿಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹತ್ವದ ಸಭೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅವರ ಅಧ್ಯಕ್ಷತೆ
ಫೋಟೋ


ಗದಗ, 13 ಜನವರಿ (ಹಿ.ಸ.)

ಆ್ಯಂಕರ್:

ಗದಗ ಜಿಲ್ಲೆಯ ಸಪಾಯಿ ಕರ್ಮಚಾರಿಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹತ್ವದ ಸಭೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀಧರ ಅವರು, ಸಪಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳು ಯಾವುದೇ ವಿಳಂಬವಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಸಂಪೂರ್ಣ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಪಾಯಿ ಕರ್ಮಚಾರಿಗಳಿಗೆ ನಿಯಮಾನುಸಾರ ದೊರಕಬೇಕಾದ ಇಎಸ್‌ಐ, ಪಿಎಫ್ ಸೇರಿದಂತೆ ಎಲ್ಲಾ ಭತ್ಯೆಗಳನ್ನು ಸಕಾಲಕ್ಕೆ ಪಾವತಿಸಬೇಕು ಎಂದು ಸೂಚಿಸಿದ ಅವರು, ಅವರ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು ಎಂದರು.

ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿ, ಗುಣಮಟ್ಟದ ಸಂರಕ್ಷಣಾ ಸಾಧನಗಳನ್ನು ವಿತರಿಸಿ, ಆರೋಗ್ಯ ಹಾಗೂ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನ ಮಟ್ಟದಲ್ಲಿ ಸಪಾಯಿ ಕರ್ಮಚಾರಿಗಳ ಸ್ಥಿತಿಗತಿ ಕುರಿತು ತಾಲ್ಲೂಕುವಾರು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್‌ಗೆ ಅವಕಾಶ ಕೊಡಬಾರದು ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಪಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ರಮೇಶ್ ಕೊಳೂರ, ಯುವರಾಜ ಬಳ್ಳಾರಿ, ರಮೇಶ್ ಮ್ಯಾಗೇರಿ, ಹಿರಿಯಕ್ಕ ದೊಡ್ಡಮನಿ, ಲಕ್ಷ್ಮವ್ವ ಭಂಗಿ ಸೇರಿದಂತೆ ಇತರರು ಪಾಲ್ಗೊಂಡು, ಸಪಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರಕುವಂತೆ ಮಾಡಬೇಕು ಹಾಗೂ ತಮ್ಮ ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕೆಂದು ಸಭೆಯ ಗಮನ ಸೆಳೆದರು.

ಎಂ.ಎಸ್. ಕಾಯ್ದೆ ಕುರಿತು ಸಮಗ್ರ ಅರಿವು ಮೂಡಿಸುವುದು ಹಾಗೂ ಆರೋಗ್ಯ ತಪಾಸಣೆಗಳು ಗುಣಮಟ್ಟದಿಂದ ಕೂಡಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಅವರು ಜಿಲ್ಲೆಯಲ್ಲಿ ಈಗಾಗಲೇ ಸಪಾಯಿ ಕರ್ಮಚಾರಿಗಳಿಗೆ ನೀಡಿರುವ ಸೌಲಭ್ಯಗಳು ಹಾಗೂ ಮುಂದಿನ ದಿನಗಳಲ್ಲಿ ನೀಡಬೇಕಾದ ಸವಲತ್ತುಗಳ ಕುರಿತು ವಿವರವಾದ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande