ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳ ಪತ್ತೆ
ಗದಗ, 13 ಜನವರಿ (ಹಿ.ಸ.) ಆ್ಯಂಕರ್: ರಾಜವಂಶಗಳ ಆಳ್ವಿಕೆಯ ಸ್ಮರಣೆ ಹೊತ್ತಿರುವ, ನೂರಾರು ಪುರಾತನ ದೇವಾಲಯಗಳು ಹಾಗೂ ಶಾಸನಗಳಿಗಾಗಿ ಖ್ಯಾತಿಯಾಗಿರುವ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಅಪಾರ ಕುತೂಹಲ ಮೂಡಿಸಿದೆ. ಇತ್
ಫೋಟೋ


ಗದಗ, 13 ಜನವರಿ (ಹಿ.ಸ.)

ಆ್ಯಂಕರ್:

ರಾಜವಂಶಗಳ ಆಳ್ವಿಕೆಯ ಸ್ಮರಣೆ ಹೊತ್ತಿರುವ, ನೂರಾರು ಪುರಾತನ ದೇವಾಲಯಗಳು ಹಾಗೂ ಶಾಸನಗಳಿಗಾಗಿ ಖ್ಯಾತಿಯಾಗಿರುವ ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ನಿಧಿ ಪತ್ತೆ ಪ್ರಕರಣದ ಬೆನ್ನಲ್ಲೇ ಇದೀಗ ಮುತ್ತು, ಹವಳ, ನೀಲಮಣಿ ಸೇರಿದಂತೆ ಹಲವು ಅಮೂಲ್ಯ ಪುರಾತನ ವಸ್ತುಗಳು ಬೆಳಕಿಗೆ ಬಂದಿರುವುದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತೊಮ್ಮೆ ಸ್ಮರಿಸುವಂತೆ ಮಾಡಿದೆ.

ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಅವರಿಗೆ ಈ ಬಾರಿ ಹಲವು ಪುರಾತನ ವಸ್ತುಗಳು ಸಿಕ್ಕಿದ್ದು, ಇದರಲ್ಲಿ ಮುತ್ತು, ಕೆಂಪು ಹವಳ, ನೀಲಮಣಿ, ಸ್ಪಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ವಿವಿಧ ವಿಧದ ಆಭರಣ ಸಂಬಂಧಿತ ವಸ್ತುಗಳು ಸೇರಿವೆ. ಗ್ರಾಮದಲ್ಲಿ ಮಳೆ ಬಂದ ನಂತರ ನೆಲ ಸಡಿಲವಾಗುವ ಸಮಯದಲ್ಲಿ ಶೋಧ ಕಾರ್ಯ ನಡೆಸುವುದು ಬಸಪ್ಪ ಬಡಿಗೇರ ಅವರ ಪದ್ಧತಿಯಾಗಿದ್ದು, ಹಲವು ವರ್ಷಗಳಿಂದ ಅವರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಹ ಬಸಪ್ಪ ಬಡಿಗೇರ ಅವರಿಗೆ ಲಕ್ಕುಂಡಿ ಗ್ರಾಮ ವ್ಯಾಪ್ತಿಯಲ್ಲಿ ಪುರಾತನ ಕಾಲದ ವಸ್ತುಗಳು ಸಿಕ್ಕಿದ್ದವು. ಆಗ ಅವುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿ, ನಾಗರಿಕ ಜವಾಬ್ದಾರಿಯನ್ನು ಮೆರೆದಿದ್ದರು. ಇದೀಗ ಮತ್ತೆ ಪತ್ತೆಯಾಗಿರುವ ವಸ್ತುಗಳು ಪುರಾತತ್ವದ ದೃಷ್ಟಿಯಿಂದ ಮಹತ್ವ ಹೊಂದಿರಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ರಾಷ್ಟ್ರಕೂಟರು, ಚಾಲುಕ್ಯರು ಸೇರಿದಂತೆ ಹಲವು ರಾಜವಂಶಗಳು ಆಳ್ವಿಕೆ ನಡೆಸಿದ ಇತಿಹಾಸ ಹೊಂದಿರುವ ಲಕ್ಕುಂಡಿ ಗ್ರಾಮವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಇಂತಹ ಪತ್ತೆಗಳು ಆಗಾಗ್ಗೆ ಸಂಭವಿಸುತ್ತಿರುವುದು ವಿಶೇಷವಾಗಿದೆ. ಗ್ರಾಮದಲ್ಲಿ ಅಪಾರ ಚಿನ್ನ ಹಾಗೂ ಅಮೂಲ್ಯ ವಸ್ತುಗಳು ಅಡಗಿವೆ ಎಂಬ ನಂಬಿಕೆ ಬಹುಕಾಲದಿಂದಲೂ ಜನರಲ್ಲಿ ಇದೆ. ಅದೇ ನಂಬಿಕೆಯ ಹಿನ್ನೆಲೆಯಲ್ಲೇ ಇತ್ತೀಚಿನ ದಿನಗಳಲ್ಲಿ ನಿಧಿ ಪತ್ತೆ ಪ್ರಕರಣಗಳು ಹಾಗೂ ಈಗಿನ ಪುರಾತನ ವಸ್ತುಗಳ ಪತ್ತೆ ಗ್ರಾಮವನ್ನು ಮತ್ತೆ ಸುದ್ದಿಯ ಕೇಂದ್ರಬಿಂದು ಮಾಡಿವೆ.

ಪತ್ತೆಯಾಗಿರುವ ವಸ್ತುಗಳು ಯಾವ ಕಾಲಘಟ್ಟಕ್ಕೆ ಸೇರಿದವು, ಅವುಗಳ ಐತಿಹಾಸಿಕ ಹಾಗೂ ಪುರಾತತ್ವ ಮೌಲ್ಯ ಎಷ್ಟು ಎಂಬುದು ತಜ್ಞರ ಪರಿಶೀಲನೆಯ ನಂತರವೇ ಸ್ಪಷ್ಟವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಗಮನಹರಿಸಿ ಸೂಕ್ತ ತನಿಖೆ ನಡೆಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ. ಲಕ್ಕುಂಡಿಯ ಶ್ರೀಮಂತ ಇತಿಹಾಸದ ಮತ್ತೊಂದು ಅಧ್ಯಾಯವೇ ಇದಾಗಬಹುದೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಟ್ಟಾರೆ, ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು ಪತ್ತೆಯಾಗಿರುವುದು ಇತಿಹಾಸಾಸಕ್ತರು, ಪುರಾತತ್ವ ತಜ್ಞರು ಹಾಗೂ ಸಾರ್ವಜನಿಕರಲ್ಲಿ ಹೊಸ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ಪತ್ತೆಗಳು ಯಾವ ತಿರುವು ಪಡೆಯಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande