
ನವದೆಹಲಿ, 11 ಜನವರಿ (ಹಿ.ಸ.) :
ಆ್ಯಂಕರ್ : ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಜೀವನವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆತ್ಮವಾಗಿದ್ದು, ಸಂಘದ ಧ್ಯೇಯವಾಕ್ಯವೇ “ಭಾರತ ಸರ್ವೋಚ್ಚ” ಎಂದು ಆರ್‌ಎಸ್‌ಎಸ್ ಸರ್ಸಂಘಚಾಲಕ್ ಡಾ. ಮೋಹನ್ ಭಾಗವತ್ ಹೇಳಿದರು.
ಆರ್‌ಎಸ್‌ಎಸ್ ಕಾಲಾನುಸಾರ ತನ್ನ ಮೂಲ ಸಿದ್ಧಾಂತಗಳನ್ನು ಬದಲಾಯಿಸುತ್ತಿಲ್ಲ ಬದಲಾಗಿ ತನ್ನ ಪರಂಪರೆ, ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್‌ನ 100 ವರ್ಷಗಳ ಐತಿಹಾಸಿಕ ಪಯಣವನ್ನು ಆಧರಿಸಿದ ‘ಶತಕ್’ ಚಲನಚಿತ್ರದ ಮೊದಲ ಗೀತೆ ‘ಭಗವಾ ಹೈ ಅಪ್ನಿ ಪೆಹಚಾನ್’ ಬಿಡುಗಡೆ ಕಾರ್ಯಕ್ರಮ ಭಾನುವಾರ ದೆಹಲಿಯ ಕೇಶವ್ ಕುಂಜ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡಾ. ಮೋಹನ್ ಭಾಗವತ್ ಅವರು ಔಪಚಾರಿಕವಾಗಿ ಗೀತೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ‘ಶತಕ್’ ಚಿತ್ರ ಮತ್ತು ಅದರ ಗೀತೆ ಸಂಘದ ದೇಶಭಕ್ತಿ, ಸೇವಾ ಮನೋಭಾವ ಹಾಗೂ ಆಂತರಿಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತವೆ ಎಂದರು. ಈ ಚಿತ್ರವು ಇದುವರೆಗೂ ಸಾರ್ವಜನಿಕರ ಗಮನಕ್ಕೆ ಬರದ ಸಂಘದ ಅನೇಕ ಕಥೆಗಳನ್ನು ಅನಾವರಣಗೊಳಿಸುತ್ತದೆ ಎಂದು ಹೇಳಿದರು.
ಡಾ. ಹೆಡ್ಗೆವಾರ್ ಅವರು ಜನರನ್ನು ಸಂಪರ್ಕಿಸುವ ಅಪರೂಪದ ಸಾಮರ್ಥ್ಯ ಹೊಂದಿದ್ದರು. ಜೀವನದ ಕಠಿಣ ಸವಾಲುಗಳನ್ನೂ ಸಮಚಿತ್ತದಿಂದ ಎದುರಿಸಿದ ಅವರ ಗುಣಗಳು ಇಂದಿಗೂ ಸಂಘದ ಕಾರ್ಯಪದ್ದತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿವೆ. ಸಂಘದ ಸಿದ್ಧಾಂತಗಳು ಸ್ಥಿರವಾಗಿರುವುದಿಲ್ಲ; ಸಮಾಜ ಮತ್ತು ರಾಷ್ಟ್ರದ ಅಗತ್ಯಗಳಿಗೆ ಅನುಗುಣವಾಗಿ ಅವು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಎಂದು ಭಾಗವತ್ ಹೇಳಿದರು.
‘ಭಗವಾ ಹೈ ಅಪ್ನಿ ಪೆಹಚಾನ್’ ಗೀತೆಯು ಕೇಸರಿಯನ್ನು ಕೇವಲ ಧ್ವಜ ಅಥವಾ ಸಂಕೇತವಾಗಿ ಮಾತ್ರವಲ್ಲ, ಭಾರತೀಯ ನಾಗರಿಕತೆಯ ಚೇತನ ಮತ್ತು ಗುರುತಿನ ಸಾರವಾಗಿ ಪ್ರಸ್ತುತಪಡಿಸುತ್ತದೆ. ತ್ಯಾಗ, ತಪಸ್ಸು, ಶಿಸ್ತು, ಸೇವೆ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿ ಕೇಸರಿಯನ್ನು ಹಾಡು ವರ್ಣಿಸುತ್ತದೆ. ಸಮಾಜವು ಸಾಮೂಹಿಕ ಚೇತನದೊಂದಿಗೆ ಒಂದಾಗಿ ರಾಷ್ಟ್ರ ಹಿತಕ್ಕಾಗಿ ಕಾರ್ಯ ನಿರ್ವಹಿಸಬೇಕೆಂಬ ಸಂದೇಶವನ್ನು ಇದು ಸಾರುತ್ತದೆ.
ಖ್ಯಾತ ಗಾಯಕ ಸುಖ್ವಿಂದರ್ ಸಿಂಗ್ ಈ ಗೀತೆಗೆ ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಸನ್ನಿ ಇಂದರ್ ಅವರ ಮಧುರ ಸಂಗೀತ ಹಾಗೂ ಗೀತರಚನೆಕಾರ ರಾಕೇಶ್ ಕುಮಾರ್ ಪಾಲ್ ಅವರ ಪ್ರಭಾವಶಾಲಿ ಸಾಹಿತ್ಯವು ಹಾಡಿಗೆ ಭಾವನಾತ್ಮಕ ಗಾಢತೆಯನ್ನು ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸುಖ್ವಿಂದರ್ ಸಿಂಗ್, ಮೋಹನ್ ಭಾಗವತ್ ಅವರಿಂದ ತಮ್ಮ ಗೀತೆಯನ್ನು ಬಿಡುಗಡೆ ಮಾಡಿಸಿಕೊಳ್ಳುವುದು ಹೆಮ್ಮೆ ಹಾಗೂ ಆಶೀರ್ವಾದದ ಕ್ಷಣವಾಗಿದೆ ಎಂದರು. ಇದು ಕೇವಲ ವೃತ್ತಿಪರ ಕೆಲಸವಲ್ಲ; ರಾಷ್ಟ್ರಕ್ಕೆ ಸಲ್ಲಿಸುವ ಸೇವೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
1925ರಲ್ಲಿ ನಾಗ್ಪುರದಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್‌ನಿಂದ ಇಂದಿನವರೆಗಿನ 100 ವರ್ಷಗಳ ಪಯಣವನ್ನು ‘ಶತಕ್’ ಚಿತ್ರ ಚಿತ್ರಿಸುತ್ತದೆ. ಸಂಘದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಕೊಡುಗೆಗಳನ್ನು ಈ ಚಿತ್ರ ವಿಶ್ಲೇಷಿಸುತ್ತದೆ. ಅನಿಲ್ ಡಿ. ಅಗರ್ವಾಲ್ ಅವರ ಪರಿಕಲ್ಪನೆಯ ಈ ಚಿತ್ರವನ್ನು ಆಶಿಶ್ ಮಾಳ್ ನಿರ್ದೇಶಿಸಿದ್ದು, ವೀರ್ ಕಪೂರ್ ನಿರ್ಮಿಸಿದ್ದಾರೆ. ಆಶಿಶ್ ತಿವಾರಿ ಸಹ-ನಿರ್ಮಾಪಕರಾಗಿದ್ದು, ಎಡಿಎ ಡಿಗ್ರಿ ಎಲ್‌ಎಲ್‌ಪಿ ಚಿತ್ರವನ್ನು ಪ್ರಸ್ತುತಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa