ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ನಿಂದ ೫ ಸಾವಿರ ಮಕ್ಕಳಿಗೆ ಸಮವಸ್ತ್ರ
ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ನಿಂದ ೫ ಸಾವಿರ ಮಕ್ಕಳಿಗೆ ಸಮವಸ್ತ್ರ
ಚಿತ್ರ : ಕೋಲಾರ ನಗರದ ಸ್ಕೌಟ್ ಭವನದಲ್ಲಿ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ನಿಂದ ಕೋಲಾರ ತಾಲ್ಲೂಕಿನ ಹುತ್ತೂರು,ಹೋಳೂರು ಮತ್ತು ಕಸಬಾ ಹೋಬಳಿಗಳ ನೂರೆಪ್ಪತ್ತು ಶಾಲೆಗಳ ೫ಸಾವಿರ ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಬಿಇಒ ಮಧುಮಾಲತಿ ಮಾತನಾಡಿದರು.


ಕೋಲಾರ, 0೯ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಮಾಜದ ಒಳತಿಗಾಗಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಸಮುದಾಯ ಹಾಗೂ ಸಂಘ ಸಂಸ್ಥೆಗಳು ಸಹಯಹಸ್ತ ಚಾಚುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದ್ದು, ೫ ಸಾವಿರ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸುತ್ತಿರುವ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬಿಇಒ ಮಧುಮಾಲತಿ ಧನ್ಯವಾದ ಸಲ್ಲಿಸಿದರು.

ಕೋಲಾರ ನಗರದ ಸ್ಕೌಟ್ ಭವನದಲ್ಲಿ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ನಿಂದ ಕೋಲಾರ ತಾಲ್ಲೂಕಿನ ಹುತ್ತೂರು,ಹೋಳೂರು ಮತ್ತು ಕಸಬಾ ಹೋಬಳಿಗಳ ನೂರೆಪ್ಪತ್ತು ಶಾಲೆಗಳ ೫ಸಾವಿರ ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಬಿಇಒ ಮಧುಮಾಲತಿ ಅವರು ಮಾತನಾಡಿದರು.

ದಾನಿಗಳು ನೀಡುವ ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳಿ ಇಲ್ಲ ಹೆಚ್ಚುವರಿಯಾಗಿ ತಾಲ್ಲೂಕು ,ಜಿಲ್ಲೆಯಿಂದ ಹೊರಗೆ ಹೋಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದ ಅವರು, ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆ ಸರಿಯಗಿರಲಿ, ಸಮಯಕ್ಕೆ ಶಾಲೆಗೆ ಹೋಗಿ ಕೆಲಸ ನಿರ್ವಹಿಸಿ ಮಕ್ಕಳ ಪ್ರಗತಿಗೆ ಶ್ರಮಿಸಿ ಎಂದರು.

ಮಕ್ಕಳಿಗೆ ಕರೆ ನೀಡಿದ ಅವರು, ವಿದ್ಯೆ ಸಾಧಕರ ಸ್ವತ್ತು ಎಂಬುದನ್ನು ಅರಿತು ದಾನಿಗಳು ನೀಡುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಿ, ಸಮಾಜ,ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ದಾನಿಗಳು ನೀಡುವ ಸಾಮಗ್ರಿಗಳನ್ನ ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬೆಳೆದು ಮುಂದೆ ತಾವು ಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಸಲಹೆ ನೀಡಿದ ಅವರು, ನೀವು ಪಡೆದ ಈ ಪ್ರಯೋಜನದಿಂದ ನೀವು ಸಾಧನೆ ಮಾಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ ಮಕ್ಕಳಿಗೆ ನೆರವು ನೀಡುವ ಶಕ್ತಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾಜಸ್ಥಾನ್ ಕಾಸ್ಮೋ ಕ್ಲಬ್ ಚೇರ್ಮನ್ ಮಹೇಶ್ ಮಾತನಾಡಿ, ನಾವು ಸರ್ಕಾರಿ ಶಾಲೆಗಳ ಇಪ್ಪತ್ತು ಲಕ್ಷ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಯೋಜನೆ ರೂಪಿಸಿದ್ದು, ದಾನಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು .ಸಮವಸ್ತ್ರದ ಜೊತೆಗೆ ಸ್ಮಾರ್ಟ್ ಬೋರ್ಡ್, ಕ್ರೀಡಾ ಸಾಮಗ್ರಿ ಹೀಗೆ ಹತ್ತು ಹಲವು ಸಾಮಗ್ರಿಗಳನ್ನು ಸರ್ಕಾರಿ ಶಾಲೆಗಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ವಿದ್ಯಾರ್ಥಿ ಸಮುದಾಯ ವಿನಯದಿಂದಿದ್ದರೆ ಸಾಧನೆಗೆ ಅದೇ ರಹದಾರಿಯಾಗುತ್ತದೆ, ಸಮಾಜ ನನಗೇನು ನೀಡಿದೆ ಎಂದು ಪ್ರಶ್ನಿಸುವ ಸಣ್ಣತನ ತೋರದೇ ಸಮಾಜಕ್ಕೆ ನಾನೇನಾದರೂ ನೀಡಲೇಬೇಕು ಎಂಬ ಸಂಕಲ್ಪದೊಂದಿಗೆ ಅಧ್ಯಯನ ಮಾಡಿ ಎಂದರು.

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಲ್ಲಿ ಓದುವಂತಾಗಲು ದಾನಿಗಳ ಮತ್ತಷ್ಟು ನೆರವು ಅಗತ್ಯವಿದೆ, ಈ ನಿಟ್ಟನಲ್ಲಿ ನಾವು ಇನ್ನು ಹೆಚ್ಚಿನ ನೆರವು ನೀಡುವ ಕುರಿತು ಚಿಂತನೆ ಮಾಡಿರುವುದಾಗಿ ತಿಳಿಸಿ, ಮಕ್ಕಳಿಗೆ ಶುಭ ಹಾರೈಸಿದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಶಾಲಾ ಮಕ್ಕಳಿಗೆ ನೆರವಾಗುವ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ನ ದಾನಿಗಳಿಗೆ ತಾಲ್ಲೂಕಿನ ಪರವಾಗಿ ಧನ್ಯವಾದ ತಿಳಿಸುವೆ, ಬಳಗ ನೀವು ನೀಡಿರುವ ಸೌಲ

ಪ್ರಾಮಾಣಿಕವಾಗಿ ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ ಮಾತನಾಡಿ, ನಮ್ಮ ಜಿಲ್ಲೆಯ ಅನೇಕ ಶಾಲೆಗಳಿಗೆ ದಾನಿಗಳ ಸಹಕಾರದಿಂದ ಶಾಲೆಗಳಿಗೆ ಬೇಕಾಗ ಕಲಿಕಾ ಸಾಮಗ್ರಿ, ಪೀಠೋಪಕರಣಗಳು ಮತ್ತು ಮಕ್ಕಳ ಕಲಿಕೆಗೆ ಬೇಕಾದ ಸಾಮಗ್ರಿ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ದಾನಿಗಳು ನೀಡುತ್ತಿರುವ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳದಿರಿ ಎಂದ ಅವರು, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಇರುವ ಸಂಸ್ಕಾರ ಮುಂದುವರೆಯಬೇಕು, ನೀವು ಸಮಾಜದಲ್ಲಿನ ಖಾಸಗಿ ಶಾಲಾ ಮಕ್ಕಳೊಂದಿಗೆ ಸಾಧನೆಯಲ್ಲಿ ಪೈಪೋಟಿ ನಡೆಸಿ ಗೆಲುವು ಸಾಧಿಸಬೇಕು ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಹರ್ಷ ಹಾಜರಿದ್ದು, ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಚಂದ್ರಪ್ಪ ,ಗಂಗಾಧರ್ ,ಚಂದ್ರಶೇಖರ್ ,ಬಾಬುರಾವ್,ಬೈರೇಗೌಡ ಮುಂತಾದ ಶಿಕ್ಷಕರು ಹಾಜರಿದ್ದರು.

ಚಿತ್ರ : ಕೋಲಾರ ನಗರದ ಸ್ಕೌಟ್ ಭವನದಲ್ಲಿ ರಾಜಸ್ಥಾನ್ ಕಾಸ್ಮೋ ಕ್ಲಬ್ ಫೌಂಡೇಷನ್ನಿಂದ ಕೋಲಾರ ತಾಲ್ಲೂಕಿನ ಹುತ್ತೂರು,ಹೋಳೂರು ಮತ್ತು ಕಸಬಾ ಹೋಬಳಿಗಳ ನೂರೆಪ್ಪತ್ತು ಶಾಲೆಗಳ ೫ಸಾವಿರ ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಬಿಇಒ ಮಧುಮಾಲತಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande