ಅತಿವೃಷ್ಟಿಯಿಂದಾದ ಹಾನಿ ಕುರಿತು ವಿಡಿಯೋ ಕಾನ್ಫರೆನ್ಸ್ ಸಭೆ
ಗದಗ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯಾದ್ಯಂತ ಅತಿವೃಷ್ಟಿಯಿಂದಾದ ಹಾನಿ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಸಭೆಯಲ್ಲಿ ಪೂರ್ವ ಮುಂಗಾರು (1-4-
ಪೋಟೋ


ಗದಗ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯಾದ್ಯಂತ ಅತಿವೃಷ್ಟಿಯಿಂದಾದ ಹಾನಿ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

ಸಭೆಯಲ್ಲಿ ಪೂರ್ವ ಮುಂಗಾರು (1-4-25 ರಿಂದ 31-5-25 ) ಮಳೆಯಿಂದಾದ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಮನೆ ಹಾನಿ, ಪ್ರವಾಹ, ಸಿಡಿಲಿನಿಂದಾದ ಜೀವಹಾನಿ, ಜಾನುವಾರು ಪ್ರಾಣ ಹಾನಿ, ಪರಿಹಾರ ವಿತರಣೆ, ವಿವಿಧ ಜಲಾಶಯಗಳ ದುರಸ್ತಿ ಇರುವ ಕ್ರಸ್ಟ್ ಗೇಟ್ ಗಳ ಮಾಹಿತಿ, ರೈತರಿಗೆ ಅವಶ್ಯಕ ಬೀಜ, ರಸಗೊಬ್ಬರ, ಕೀಟನಾಶಕಗಳ ಬೇಡಿಕೆ, ರಸ್ತೆ ಹಾಗೂ ಮೂಲಸೌಕರ್ಯಗಳ ಹಾನಿ ಕುರಿತು ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಬಗ್ಗೆ ದೃಢೀಕರಿಸಿ, 10 ದಿನಗಳರೊಳಗೆ ಸಮೀಕ್ಷೆ ವರದಿ ಸಲ್ಲಿಸಬೇಕು. ಮನೆಹಾನಿ, ಪ್ರಾಣ ಹಾನಿ, ಜಾನುವಾರು ಹಾನಿ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಕಲ್ಪಿಸಲು ಸೂಚಿಸಿ, ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕಗಳ ಪೂರೈಕೆ ಬಗ್ಗೆಯೂ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿ ಕುರಿತು ಮಾಹಿತಿ ನೀಡಿ, ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.

ಗದಗ ಜಿಲ್ಲೆಯಲ್ಲಿ 93709 ಸಾವಿರ ಹೆಕ್ಟೇರ್ ಪ್ರದೇಶ ಕೃಷಿ ಹಾಗೂ 7454 ಸಾವಿರ ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಸೇರಿ ಒಟ್ಟು ಜಿಲ್ಲೆಯಲ್ಲಿ 1.01 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. 183 ಬಾಗಶ: ಮನೆ ಹಾನಿಯಾಗಿದ್ದು, ಈವರೆಗೆ ಮಾರ್ಗಸೂಚಿಯನ್ವಯ 28.04 ಲಕ್ಷ ಪರಿಹಾರ‌ ನೀಡಲಾಗಿದೆ. ಜಿಲ್ಲೆಯಲ್ಲಿ ವಾಡಿಕೆಮಳೆಗಿಂತ ಶೇ. 33 ರಷ್ಟು ಅಧಿಕ‌ ಮಳೆಯಾಗಿದೆ.

ಜಿಲ್ಲೆಯಲ್ಲಿ 3.12 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇತ್ತು, ಶೇ. 108 ರಷ್ಟು ಗುರಿ ಸಾಧನೆಯಾಗಿದ್ದು, 1.49 ಲಕ್ಷ ಹೆಕ್ಟೇರ್ ಹೆಸರು ಬೆಳೆ ಹಾಗೂ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಇತರೆ ಬೆಳೆ ಹಾನಿಯಾಗಿದೆ. ಇದರಿಂದಾಗಿಗಿ ಜಿಲ್ಲೆಯ ಒಟ್ಟಾರೆ 94 ಸಾವಿರ ರೈತರು ಹಾನಿ ಅನುಭವಿಸಿದ್ದಾರೆ ಎಂದು ಡಿಸಿ ಸಿ ಎನ್ ಶ್ರೀಧರ ಮಾಹಿತಿ ಒದಗಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಜಿಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಎಸಿ ಗಂಗಪ್ಪ ಎಂ, ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ತಾರಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಹುಲಗಣ್ಣವರ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟೆಮನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಬೆಳೆದ ಹೆಸರು ಬೆಳೆ ಇನ್ನೇನು ಪಸಲು ಸಿಗುತ್ತದೆ ಎಂಬ ನಿರೀಕ್ಷೆ ಯಲ್ಲಿದ್ದ ರೈತರಿಗೆ ಅತಿವೃಷ್ಠಿಯಿಂದಾಗಿ ಹೆಸರು ಬೆಳೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿದ್ದು, ಶೀಘ್ರವಾಗಿ ಜಂಟಿ ಸಮೀಕ್ಷೆ ಕೈಗೊಂಡು ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಬೆಳೆ ಹಾನಿಗೀಡಾದ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಕೆ ಪಾಟೀಲ ಅವರು ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಸೆಪ್ಟಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 721ಮಿ.ಮೀ ಇದ್ದು, 753 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು.

ಈ ಅವಧಿಯಲ್ಲಿ ಚಾಮರಾಜನಗರದಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆಯಿದೆ. ಪ್ರಮುಖ ಜಲಾಶಯಗಳ ಗರಿಷ್ಟ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಸ್ತುತ 840.52 ಟಿಎಂಸಿ ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ 856.17 ಟಿಎಂಸಿ ಸಂಗ್ರಹ ಇತ್ತು.

ತುಂಗಾಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8ಕ್ರೆಸ್ಟ್ ಗೇಟ್ಗಳು ಅಳವಡಿಕೆಗೆ ಸಿದ್ಧವಿದೆ. ಕ್ರೆಸ್ಟ್ಗೇಟು ಬದಲಾವಣೆ ಸೇರಿದಂತೆ ಅಣೆಕಟ್ಟಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ತುಂಗಾಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ.

ತುಂಗಾ ಭದ್ರಾ ಅಣೆಕಟ್ಟಿನಲ್ಲಿ ಪ್ರಥಮ ಬೆಳೆಗೆ ಮಾತ್ರ ನೀರು ಲಭ್ಯವಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ನೀರು ಹರಿಸುವ ಪೂರ್ವದಲ್ಲೇ ಎಲ್ಲಾ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಮಳೆ ಹಾನಿಯಿಂದ ಹಾನಿಗೀಡಾಗಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು.

ಮುಂಗಾರು ಹಂಗಾಮಿನಲ್ಲಿ ಶೇ.98 ಬಿತ್ತನೆ ಪೂರ್ಣಗೊಂಡಿದೆ. ಬಿತ್ತನೆ ಗುರಿ 82.50 ಲಕ್ಷ ಹೆಕ್ಟೇರ್ ಇದ್ದು, 80.76 ಲಕ್ಷ ಹೆಕ್ಟೇರ್ ವಾಸ್ತವಿಕ ಬಿತ್ತನೆಯಾಗಿದೆ.

ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಹಾನಿ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, 480256 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 40407 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು 520663 ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಮಳೆಗೆ ಸಂಬಂಧಿಸಿದಂತೆ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 111 ಮಂದಿ ಸಾವನ್ನಪ್ಪಿದ್ದು ಎಲ್ಲಾ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದ್ದು, ಒಟ್ಟು 5.55ಕೋಟಿ ಪರಿಹಾರ ನೀಡಲಾಗಿದೆ.

651ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9087 ಮನೆಗಳು ಭಾಗಶಃ ಹಾನಿಯಾಗಿವೆ. ಸಂಪೂರ್ಣ ಹಾನಿಯಾದ 649 ಮನೆಗಳಿಗೆ ಹಾಗೂ ಭಾಗಶಃ ಹಾನಿಯಾದ 8608 ಮನೆಗಳಿಗೆ ಪರಿಹಾರ ಪಾವತಿಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ಹಾಗೂ ವಿವಿಧ ವಸತಿ ಯೋಜನೆಗಳಡಿ ಮನೆಯನ್ನು ಸಹ ಒದಗಿಸಲು ಕ್ರಮ ಕೈಗೊಳ್ಳಬೇಕು.

ಈ ಅವಧಿಯಲ್ಲಿ ಒಟ್ಟು 766 ಜಾನುವಾರುಗಳು ಸಾವಿಗೀಡಾಗಿದ್ದು, ಒಟ್ಟು 1.52 ಕೋಟಿ ಪರಿಹಾರ ವಿತರಿಸಲಾಗಿದೆ.

ಮಳೆಯಿಂದಾಗಿ 683 ಕಿಮೀ ರಾಜ್ಯ ಹೆದ್ದಾರಿ, 1383 ಜಿಲ್ಲಾ ಪ್ರಮುಖ ಹೆದ್ದಾರಿ, 5558 ಗ್ರಾಮೀಣ ರಸ್ತೆಗಳು, 656 ಸೇತುವೆ/ಕಲ್ವರ್ಟ್ಗಳು, 1877ಶಾಲಾ ಕಟ್ಟಡಗಳು, 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1018 ಅಂಗನವಾಡಿಗಳು, 25279 ವಿದ್ಯುತ್ ಕಂಬಗಳು, 819 ಟ್ರಾನ್ಸ್ಫಾರ್ಮರ್ಗಳು, 31 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande