ಬೆಂಗಳೂರು, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಲೋಕ ಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು, ನಿವೃತ್ತ ಐಆರ್ಎಸ್ ಅಧಿಕಾರಿ ಗಣಪತಿ ಭಟ್ ಅವರನ್ನು, ನ್ಯಾಯಮೂರ್ತಿ ಯಶವಂತ ವರ್ಮ ಅವರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ರಚಿಸಲಾದ ಮೂವರು ಸದಸ್ಯರ ತನಿಖಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ಬಗ್ಗೆ 2025ರ ಸೆಪ್ಟೆಂಬರ್ 5ರಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಈ ಸಮಿತಿಯ ಸದಸ್ಯರಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ, ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ನಿಯುಕ್ತಿಯಾಗಿದ್ದಾರೆ.
1989ನೇ ಬ್ಯಾಚ್ನ (ಆದಾಯ ತೆರಿಗೆ) ಐಆರ್ಎಸ್ ಅಧಿಕಾರಿಯಾಗಿರುವ ಗಣಪತಿ ಭಟ್ ಇತ್ತೀಚೆಗೆ ಬೆಂಗಳೂರು ಕಚೇರಿ ಹೊಂದಿದ್ದ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಅಂತಾರಾಷ್ಟ್ರೀಯ ತೆರಿಗೆ ವಿಭಾಗದ ಪ್ರಧಾನ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಆದಾಯ ತೆರಿಗೆ ಇಲಾಖೆಯ ಮೂರು ದಶಕಗಳಿಗಿಂತ ಹೆಚ್ಚಿನ ವೃತ್ತಿಜೀವನದಲ್ಲಿ ಅವರು ಹಲವಾರು ಪ್ರಮುಖ ಮತ್ತು ಸೂಕ್ಷ್ಮ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸಂಕೀರ್ಣ ತನಿಖೆಗಳು ಹಾಗೂ ನೀತಿ ವಿಷಯಗಳಲ್ಲಿನ ಪರಿಣತಿಗೆ ಪ್ರಸಿದ್ಧರಾಗಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ, ಮತ್ತು ಇತ್ತೀಚೆಗೆ ಕರ್ನಾಟಕ–ಗೋವಾ ಮತ್ತು ಕೇರಳದ ಆದಾಯ ತೆರಿಗೆ ತನಿಖಾ ಮಹಾನಿರ್ದೇಶಕರಾಗಿದ್ದಾಗ, ಅವರು ಅನೇಕ ರೋಚಕ ಪ್ರಕರಣಗಳಲ್ಲಿ ಆದಾಯ ತೆರಿಗೆ ತನಿಖೆಗಳನ್ನು ನಡೆಸಿ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಕಾರಣರಾಗಿದ್ದರು.
ಭಾರತೀಯ ಪ್ರಜೆಗಳು ಹೊಂದಿರುವ ಗಡಿಯಾಚೆಗಿನ ಹಣಕಾಸು ವ್ಯವಹಾರಗಳು, ಸಾಗರೋತ್ತರ ಆಸ್ತಿಗಳು ಮತ್ತು ವಿದೇಶಿ ಬ್ಯಾಂಕ್ ಖಾತೆಗಳ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರ ವೃತ್ತಿಪರ ಕಾರ್ಯವು ಕಾನೂನಿನ ಸೂಕ್ಷ್ಮದೃಷ್ಟಿ, ತನಿಖಾ ಕೌಶಲ್ಯ ಮತ್ತು ನೀತಿ ಒಳನೋಟಗಳ ಅಪರೂಪದ ಸಂಮಿಶ್ರಣದ ನಿದರ್ಶನವಾಗಿದೆ.
ಗಣಪತಿ ಭಟ್ ಅವರು ಭಾರತ ಸರ್ಕಾರದ ಅನೇಕ ಇಲಾಖೆಗಳಲ್ಲೂ ನಿಯೋಜನೆಯ ಮೇಲೆ ಕಾರ್ಯ ನಿರ್ವಹಿಸಿದ್ದು, ವಿಶೇಷವಾಗಿ ಲೋಕಸಭೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಲವಾರು ಸಂಸದೀಯ ಸಮಿತಿಗಳನ್ನು ಅವುಗಳ ಕಾರ್ಯದರ್ಶಿಯಾಗಿ ನಿರ್ವಹಿಸಿದ್ದರು. ಅವರು ಅಕಾಡೆಮಿಕ್ ಮತ್ತು ನೀತಿ ಚರ್ಚೆಗಳಿಗೆ ಸಹ ಕೊಡುಗೆ ನೀಡಿದ್ದಾರೆ.
Tax Policy and FDI ಎಂಬ ಪುಸ್ತಕದ ಲೇಖಕರಾಗಿರುವ ಅವರು ಪ್ರಸ್ತುತ ಭಾರತೀಯ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಅಧಿಕಾರಗಳ ವಿಂಗಡಣೆ ಕುರಿತಂತೆ ಸಂಶೋಧನೆ ನಡೆಸುತ್ತಿದ್ದಾರೆ. ಅವರ ಬೌದ್ಧಿಕ ಆಸಕ್ತಿಗಳು ಆರ್ಥಿಕಶಾಸ್ತ್ರ ಮತ್ತು ತೆರಿಗೆ ವಿಷಯಗಳನ್ನೂ ಮೀರಿದೆ; ಅವರು ಸಂಸ್ಕೃತ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವುದರ ಜೊತೆಗೆ ಸಮಕಾಲೀನ ಸಾಮಾಜಿಕ–ರಾಜಕೀಯ ವಿಷಯಗಳ ತೀಕ್ಷ್ಣ ವೀಕ್ಷಕರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಿದ್ರೆಪಾಲ ಗ್ರಾಮದಲ್ಲಿ ಜನಿಸಿದ ಗಣಪತಿ ಭಟ್, ಧಾರವಾಡದಲ್ಲಿ ಬಿ.ಎ., ಪುಣೆಯಲ್ಲಿ ಎಂ.ಎ. ಮಾಡಿ, 2010ರಲ್ಲಿ ಆರ್ಥಿಕಶಾಸ್ತ್ರದಲ್ಲಿ ಪಿಎಚ್.ಡಿ. ಪೂರೈಸಿದ್ದಾರೆ. ಅಲ್ಲದೆ, ದೆಹಲಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನೂ ಪಡೆದಿದ್ದು, ಅವರಿಗೆ ಬಲವಾದ ಅಂತರ್ಶಿಸ್ತೀಯ ಕೌಶಲ್ಯವನ್ನು ಒದಗಿಸಿದೆ.
ಸಮೃದ್ಧ ವೃತ್ತಿಪರ ಅನುಭವ, ಶೈಕ್ಷಣಿಕ ಕೊಡುಗೆಗಳು ಮತ್ತು ಸೂಕ್ಷ್ಮತೆಗಳಿಂದಾಗಿ, ಆಡಳಿತ, ನೀತಿ ಮತ್ತು ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಗಣಪತಿ ಭಟ್ ಅವರನ್ನು ಮುಖ್ಯ ಧ್ವನಿಯಾಗಿ ಪರಿಗಣಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ