ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಸೋಮವಾರ ಸಾರ್ವಜನಿಕರ ಕೆಲ ಅರ್ಜಿ ಸ್ಥಳದಲ್ಲಿಯೇ ಇತ್ಯರ್ಥಗೋಳಿಸಿದರು.
ನಗರದ ಡಾ.ರಾಜ್ ಕುಮಾರ್ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ‘ಜನತಾ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕೆಲವೊಂದನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಚಿಕಿತ್ಸೆ, ಶಿಕ್ಷಣಕ್ಕಾಗಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.
ಜಿಲ್ಲೆಯ ತಾಲ್ಲೂಕುಗಳಿಂದ ಆಗಮಿಸಿದ ಸಾರ್ವಜನಿಕರು ಆಯಾ ಇಲಾಖೆಯ ಕೌಂಟರ್ ಬಳಿ ಅರ್ಜಿ ಸಲ್ಲಿಸಿದರೇ, ಇನ್ನೂ ಕೆಲವರು ನೇರವಾಗಿ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಸ್ವತಃ ಸಚಿವರೇ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಜಿಲ್ಲಾಧಿಕಾರಿಗಳು ಸಹ ಸ್ಥಳದಲ್ಲೇ ಇದ್ದು ಇದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಜನಸ್ಪಂದನಾ ಮೂಲಕ ಕೇವಲ ಸಾರ್ವಜನಿಕರ ಅಹವಾಲು ಕೇಳುವುದು ಮಾತ್ರವಲ್ಲದೇ ಆದಷ್ಟು ಶೀಘ್ರವಾಗಿ ಪರಿಹಾರ ಒದಗಿಸುವ ಕ್ರಮವನ್ನು ಕೈಗೊಂಡು ನಾಗರಿಕರಿಗೆ ಭರವಸೆ ಮೂಡಿಸಲಾಯಿತು. ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‍ಎಸ್ ತಂತ್ರಾಂಶದಲ್ಲಿ ನಮೂದಿಸಿ ಮೊಬೈಲ್ ಮೂಲಕ ಅರ್ಜಿದಾರರನ್ನು ಸಂಪರ್ಕಿಸಿ ಪರಿಹಾರ ಒದಗಿಸಲಾಗುತ್ತದೆ.
ವಿವಿಧ ಇಲಾಖೆಯ 16 ಕೌಂಟರ್ ಸ್ಥಾಪನೆ : ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತದಿಂದ ಒಟ್ಟು 16 ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು. ಇಲಾಖಾವಾರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕಂದಾಯ ಇಲಾಖೆ ಸೇರಿದಂತೆ ಭೂದಾಖಲೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ಅಬಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರೇಷ್ಮ ಇಲಾಖೆಗಳ, ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ವಿವಿಧ ಇಲಾಖೆಗಳ ಕೌಂಟರ್ ತೆರೆದು ಸಾರ್ವಜನಿಕರಿಂದ ಅರ್ಜಿ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಕಂಪ್ಯೂಟರ್‍ನಲ್ಲಿ ನಮೂದಿಸಿ ಸ್ವೀಕೃತಿಯನ್ನು ಅರ್ಜಿದಾರರಿಗೆ ನೀಡಲಾಯಿತು.
ಜನತಾ ದರ್ಶನದಲ್ಲಿ ವಿವಿಧ ತಾಲ್ಲೂಕಿನಿಂದ ಆಗಮಿಸಿದ ಸಾರ್ವಜನಿಕರು ಆಯಾ ಇಲಾಖೆಯ ಕೌಂಟರ್‍ಗಳ ಬಳಿ ತೆರಳಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಒಟ್ಟು 114 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅವುಗಳಲ್ಲಿ ಕೆಲವು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.
ಈ ವೇಳೆಯಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಬಳ್ಳಾರಿ ವಲಯ ಪೊಲೀಸ್, ಮಹಾನಿರೀಕ್ಷಕರಾದ ವರ್ತಿಕ ಕಟಿಯಾರ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಸಹಾಯಕ ಆಯುಕ್ತ ಪಿ.ಪ್ರಮೋದ್ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆಯ ಅಧ್ಯಕ್ಷರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್