ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪರಸ್ಥಳದಿಂದ ಬಳ್ಳಾರಿಗೆ ಬಂದವರಿಂದ ಬಳ್ಳಾರಿ ಅಭಿವೃದ್ಧಿಯಾಗುತ್ತಿದೆ ಮತ್ತು ಅವರೂ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.
ಬಳ್ಳಾರಿಯ ನಲ್ಲಚೆರುವು ಪ್ರದೇಶದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಜಂಟಿಯಾಗಿ ಏರ್ಪಡಿಸಿದ್ದ `ಪೌರ ಕಾರ್ಮಿಕರ ದಿನಾಚರಣೆ'ಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಮ್ಮ ಬಳ್ಳಾರಿಯ ಮೂಲ ನಿವಾಸಿಗಳು ಅಭಿವೃದ್ಧಿಯ ಕುರಿತು ಕೊಂದು ಮಾತುಗಳನ್ನಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ - ಟೀಕಿಸಿದರೂ : ಆರೋಪಿಸಿದರೂ ಅಭಿವೃದ್ಧಿ ಕೆಲಸಗಳು ನಿಲ್ಲುವುದಿಲ್ಲ. ಭವಿಷ್ಯದ ಪೀಳಿಗೆಗೆ ಅನುಕೂಲವಾಗುವ ರೀತಿಯಲ್ಲಿ ನಗರವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ .ಕೆ ಅವರು, ಬಳ್ಳಾರಿಗೆ ಬರುವ ಮೊದಲು ನಗರ ಸ್ವಚ್ಛತೆ ಬಗ್ಗೆ ನನಗೆ ಪೂರ್ವಾಗ್ರಹವಿತ್ತು. ಬಳ್ಳಾರಿ ನಗರ ಸ್ವಚ್ಛವಾಗಿದೆ. ರಸ್ತೆ ಅಗಲೀಕರಣ, ಒಳ ಚರಂಡಿ - ಹೊರ ಚರಂಡಿ ಕಾಮಗಾರಿ ನಡೆದಿದ್ದು, ಶಾಸಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ. ಸುಕುಂ, ಮಾಜಿ ಮೇಯರ್ ಎಂ. ರಾಜೇಶ್ವರಿ, ಮಹಾನಗರ ಪಾಲಿಕೆ ಸದಸ್ಯರಾದ ರಾಮಾಂಜನೇಯ, ಕುಬೇರಾ, ಪದ್ಮರೋಜ, ನಾಜು, ಗುಡಿಗಂಟಿ ಹನಮಂತು, ಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ನಾಗಲಕೆರೆ ಗೊವಿಂದ, ಪಿ. ಜಗನ್, ಎಂ. ವಿವೇಕ್, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ರಾಮುಡು ಸೇರಿದಂತೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್