ಕುಡತಿನಿ ಭೂ ಸಂತ್ರಸ್ತರ `ಸಂಡೂರು ಚಲೋ' ಪಾದಯಾತ್ರೆ : ಸೆಪ್ಟಂಬರ್ 10, 11 ರಂದು ಧರಣಿ
ಬಳ್ಳಾರಿ, 02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ ಮತ್ತು ಸಿದ್ದಮ್ಮನಹಳ್ಳಿ ಗ್ರಾಮ ವ್ಯಾಪ್ತಿಯ ಭೂ ಸಂತ್ರಸ್ತ ರೈತರು ಸೆಪ್ಟಂಬರ್ 8 ರಂದು ಕುಡತಿನಿಯಿಂದ ಸಂಡೂರು ಪಟ್ಟಣಕ್ಕೆ ಪಾದಯಾತ್ರೆ ಪ್ರಾರಂಭಿಸಿ ಸೆಪ್ಟಂಬರ್ 10
ಕುಡತಿನಿ ಭೂ ಸಂತ್ರಸ್ತರ `ಸಂಡೂರು ಚಲೋ' ಪಾದಯಾತ್ರೆ : ಸೆಪ್ಟಂಬರ್ 10, 11 ರಂದು ಧರಣಿ


ಬಳ್ಳಾರಿ, 02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ ಮತ್ತು ಸಿದ್ದಮ್ಮನಹಳ್ಳಿ ಗ್ರಾಮ ವ್ಯಾಪ್ತಿಯ ಭೂ ಸಂತ್ರಸ್ತ ರೈತರು ಸೆಪ್ಟಂಬರ್ 8 ರಂದು ಕುಡತಿನಿಯಿಂದ ಸಂಡೂರು ಪಟ್ಟಣಕ್ಕೆ ಪಾದಯಾತ್ರೆ ಪ್ರಾರಂಭಿಸಿ ಸೆಪ್ಟಂಬರ್ 10 ಮತ್ತು 11 ರಂದು ಶಾಸಕರು - ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸಿಐಟಿಯು ಜಿಲ್ಲಾ ಅಧ್ಯಕ್ಷ ಜೆ. ಸತ್ಯಬಾಬು ಅವರು ಈ ಮಾಹಿತಿ ನೀಡಿದ್ದು, ಸಂಸದರು ಮತ್ತು ಶಾಸಕರು ಮಾತುಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲಿ ನಮ್ಮ ಅಹವಾಲಿನ ಚರ್ಚೆಗೆ ಅವಕಾಶ ಸಿಗುತ್ತಿಲ್ಲ. ಕಾರಣ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಸೆಪ್ಟಂಬರ್ 8ರ ಸೋಮವಾರ ಕುಡತಿನಿಯಲ್ಲಿ ಪಾದಯಾತ್ರೆ ಪ್ರಾರಂಭಿಸಿ, ಸೆಪ್ಟಂಬರ್ 10 ರಂದು ಸಂಡೂರು ಪಟ್ಟಣವನ್ನು ತಲುಪುತ್ತೇವೆ. ಸೆಪ್ಟಂಬರ್ 10 ಮತ್ತು 11 ರಂದು ಸಂಡೂರು ಪಟ್ಟಣದಲ್ಲಿ ಶಾಸಕರು ಮತ್ತು ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಭೂ ಸಂತಸ್ತರ ಹೋರಾಟ ಸಮಿತಿ- ಕುಡತಿನಿ, ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಮತ್ತು ಕನ್ನಡ ಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸಭೆ ನಡೆಯಲಿದೆ. ಕುಡತಿನಿ ಸುತ್ತಲಿನ ವಿವಿಧ ಗ್ರಾಮಗಳ 12,500 ಎಕರೆಗಿಂತಲೂ ಹೆಚ್ಚಿನ ಭೂಮಿಯನ್ನು (ಕೆಐಡಿಬಿ) ಮೂಲಕ ರೈತರಿಂದ ಕರ್ಣಾಟಕ ರಾಜ್ಯ ಸರ್ಕಾರ ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಕೈಗಾರಿಕೆಗಳಿಗೆ ನೀಡಿದೆ. ಬಲವಂತದ ಭೂ ಸ್ವಾದೀನವನ್ನು ವಿರೋಧಿಸಿ, ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುನ ಪ್ರಕಾರ ಪ್ರತಿ ಎಕರೆಗೆ 1 ಕೋಟಿ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕಿದೆ.

ಅಲ್ಲದೇ, ಉದ್ದೇಶಿತ ಕೈಗಾರಿಕಾ ಘಟಕಗಳು ತಕ್ಷಣವೇ ಕೈಗಾರಿಕಾ ನಿರ್ಮಾಣ - ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಿ ಉದ್ಯೋಗ ಸೃಷ್ಟಿಸಬೇಕು. ಭೂ ಸಂತ್ರಸ್ತರಿಗೆ ತಕ್ಷಣವೇ ಉದ್ಯೋಗ ನೀಡಬೇಕು. ಭೂ ಸ್ವಾಧೀನವಾಗಿ 14 ವರ್ಷಗಳಾಗಿದ್ದು, ಈವರೆಗೆ ಉದ್ಯೋಗ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಕೈಗಾರಿಕೆಗಳು ಭೂ ಸಂತ್ರಸ್ತ ಕುಟುಂಬದವರಿಗೆ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ, ಜನಪ್ರತಿನಿಧಿಗಳು - ಅಧಿಕಾರಿಗಳು 980 ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ನಿರ್ಲಕ್ಷಿಸಿದಂತಿದೆ. ವಿವಿಧ ಸಂದರ್ಭಗಳಲ್ಲಿ ಸರ್ಕಾರ, ಜನಪ್ರತಿನಿಧಿಗಳು ನೀಡಿದ ಭರವಸೆಗಳು - ಮೂಡಿಸಿದ ವಿಶ್ವಾಸಗಳು ವಿಫಲವಾಗಿವೆ. ಕಾರಣ ಎರಡನೇ ಹಂತದ ಹೋರಾಟದ ರೂಪುರೇಷಕ್ಕಾಗಿ ಈ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande