ಡೆಹ್ರಾಡೂನ್, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡ್‌ನಲ್ಲಿ ನಿರಂತರ ಮಳೆಯಿಂದಾಗಿ ಚಮೋಲಿ ಜಿಲ್ಲೆಯ ನೀತಿ ಕಣಿವೆಯ ತಮಕ್ ನಾಲಾ ಸೇತುವೆ ಬಳಿ ಬಂಡೆಗಳು ಜಾರಿ ಧೌಲಿಗಂಗಾ ನದಿಯಲ್ಲಿ ದೊಡ್ಡ ಸರೋವರ ನಿರ್ಮಾಣವಾಗಿದೆ. ಈ ಸರೋವರದ ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಹೆಚ್ಚಾಗಿದ್ದು, ಸೇನೆ ಹಾಗೂ ಬಾರ್ಡರ್ ರೋಡ್ ಆರ್ಗನೈಸೇಶನ್ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ನೀರಿನ ಬಲವಾದ ಹರಿವಿನಲ್ಲಿ ಸೇತುವೆ ಕೊಚ್ಚಿ ಹೋಗಿದ್ದರಿಂದ, ತುರ್ತಾಗಿ ಪರ್ಯಾಯ ಸೇತುವೆಯನ್ನು ನಿರ್ಮಿಸಿ ಸಂಚಾರ ಪುನರಾರಂಭಿಸಿದೆ. ಜೊತೆಗೆ ಸರೋವರದ ನೀರನ್ನು ಹೊರಹಾಕಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.
ಇದರ ನಡುವೆ, ಚಮೋಲಿ ಜಿಲ್ಲೆಯ ಬದರಿನಾಥ ಕಾಂಚನಗಂಗಾ, ಭನೇರ್ಪಾನಿ, ನಂದಪ್ರಯಾಗ ಹಾಗೂ ಕಾಮೇಡಾ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿದೆ.
ರುದ್ರಪ್ರಯಾಗ ಬೈಪಾಸ್ ನಿರಂತರವಾಗಿ ನೀರಿನಿಂದ ಮುಳುಗುತ್ತಿದ್ದು, ವಾಹನ ಸಂಚಾರಕ್ಕೆ ಅಪಾಯವಾಗಿದೆ. ಬಾಗೇಶ್ವರದಲ್ಲಿ ಕಳೆದ ಎರಡು ದಿನಗಳಲ್ಲಿ ಎಂಟು ಗ್ರಾಮೀಣ ರಸ್ತೆಗಳನ್ನು ಮುಚ್ಚಲಾಗಿದೆ.
ವಿಪತ್ತು ಪೀಡಿತ ಬೈಸಾನಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಾಣೆಯಾದ ಇಬ್ಬರನ್ನು ಪತ್ತೆಹಚ್ಚಲು ತಂಡಗಳು ಶ್ರಮಿಸುತ್ತಿವೆ. ಸರಯು ಮತ್ತು ಗೋಮತಿ ನದಿಗಳ ನೀರಿನ ಮಟ್ಟ ನಿರಂತರ ಏರಿಕೆಯಲ್ಲಿ ಇದ್ದು, ಸ್ಥಳೀಯರಿಗೆ ಆತಂಕ ಹೆಚ್ಚಿಸಿದೆ.
ಉತ್ತರಕಾಶಿಯ ಸಯಾನಾ ಛಟ್ಟಿ ಹಾಗೂ ಹರ್ಷಿಲ್‌ನಲ್ಲಿಯೂ ಮಳೆಯಿಂದ ಸರೋವರ ರೂಪುಗೊಂಡಿದ್ದು, ನೀರನ್ನು ಹೊರಹಾಕುವ ಕೆಲಸ ವೇಗಗೊಳಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಗಳಿಗೆ ಹೆಚ್ಚುವರಿ ಎಚ್ಚರಿಕೆ ನೀಡಿದ್ದು, ಸ್ಥಳೀಯ ಆಡಳಿತವು ಚಾರ್‌ಧಾಮ್ ಯಾತ್ರೆಯ ಮಾರ್ಗಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa