ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು.
ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು ರೋಗಿಗಳಿಗೆ ಅಗತ್ಯ ಪೌಷ್ಠಿಕಾಂಶ ಒದಗಿಸುವ ಆಹಾರವನ್ನು ನೀಡುವ ಯೋಜನೆಯನ್ನು ಆರೋಗ್ಯ ಇಲಾಖೆ ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಜಾರಿಗೆ ತಂದಿದೆ.
ಬೆಂಗಳೂರಿನ ಸಿ.ವಿ ರಾಮನ್ ನಗರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ವಿತರಿಸುವ ಮೂಲಕ ವಿಶೇಷ ಪೌಷ್ಟಿಕ ಆಹಾರ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ರೋಗಿಗಳ ಚೇತರಿಕೆಗೆ ಚಿಕಿತ್ಸೆಯ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಕೂಡ ಮಹತ್ವದ ಪಾತ್ರ ವಹಿಸಲಿದೆ. ಈ ಯೋಜನೆಯ ಮೂಲಕ ರೋಗಿಗಳ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರವನ್ನ ಒದಗಿಸಲಾಗುವುದು.
ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರ ಸೂಕ್ತವಲ್ಲ.
ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಲಾಗಿದೆ ಎಂದರು.
ಮೊದಲ ಹಂತದದಲ್ಲಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ, ಜಯನಗರ ಹಾಗೂ ಸಿ.ವಿ ರಾಮನ್ ನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರವನ್ನು ಪ್ರತಿನಿತ್ಯ ಒದಗಿಸಲಾಗುವುದು. ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಆರೋಗ್ಯ ಇಲಾಖೆ ಯೋಜನೆಯನ್ನು ಜಾರಿಗೆ ತಂದಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಜಿಲ್ಲಾಸ್ಪತ್ರೆಗಳಿಗೆ ಪೌಷ್ಠಿಕ ಆಹಾರ ವಿತರಣೆ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa