ಸ್ಯಾಕ್ರಮೆಂಟೊ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕ್ಯಾಲಿಫೋರ್ನಿಯಾ ಶಾಸಕಾಂಗವು ದೀಪಾವಳಿಯನ್ನು ಸಾರ್ವಜನಿಕ ರಜಾ ದಿನವೆಂದು ಘೋಷಿಸುವ ಮಸೂದೆ 268 ಅನ್ನು ಅಂಗೀಕರಿಸಿದೆ.
ಇದೀಗ ರಾಜ್ಯಪಾಲ ಗ್ಯಾವಿನ್ ನ್ಯೂಸಮ್ ಅಕ್ಟೋಬರ್ 12ರೊಳಗೆ ಸಹಿ ಹಾಕಿದರೆ, ದೀಪಾವಳಿ ಕ್ಯಾಲಿಫೋರ್ನಿಯಾದ ಅಧಿಕೃತ ರಾಜ್ಯ ರಜಾದಿನಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.
ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಾರ, ಈ ಮಸೂದೆಯ ಅಡಿಯಲ್ಲಿ ಸಮುದಾಯ ಕಾಲೇಜುಗಳು ಮತ್ತು ಸಾರ್ವಜನಿಕ ಶಾಲೆಗಳು ದೀಪಾವಳಿಯಂದು ಮುಚ್ಚುವ ವ್ಯವಸ್ಥೆ ಇರುತ್ತದೆ.
ಸರ್ಕಾರಿ ನೌಕರರಿಗೆ ರಜೆ ಪಡೆಯುವ ಅವಕಾಶ ದೊರೆಯಲಿದ್ದು, ಕೆಲವರಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ಪ್ರಸ್ತುತ ಕ್ಯಾಲಿಫೋರ್ನಿಯಾದಲ್ಲಿ 11 ರಾಜ್ಯ ರಜಾದಿನಗಳಿವೆ – ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಿನ, ಸೀಸರ್ ಚಾವೆಜ್ ದಿನ, ಕಾರ್ಮಿಕ ದಿನ, ವೆಟರನ್ಸ್ ದಿನ ಮುಂತಾದವು ಸೇರಿ.
ಮಸೂದೆಯನ್ನು ಮಂಡಿಸಿದ ಶಾಸಕರಾದ ಆಶ್ ಕಲ್ರಾ (ಡೆಮೋಕ್ರಾಟ್-ಸ್ಯಾನ್ ಜೋಸ್) ಮಾತನಾಡಿ,
ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಘೋಷಿಸುವುದರಿಂದ ಭಾರತೀಯ ವಲಸಿಗರು ಮತ್ತು ಇತರ ದೇಶಗಳ ಜನರಿಗೆ ತಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಇದು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಗುರುತಿಸುವ ಹೆಜ್ಜೆಯಾಗಿದೆ ಎಂದಿದ್ದಾರೆ.
ದೀಪಾವಳಿ ಐದು ದಿನಗಳ ಕಾಲ ನಡೆಯುವ ಹಬ್ಬವಾಗಿದ್ದು, ಭಾರತದಲ್ಲಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿ ಅಕ್ಟೋಬರ್ 20ರಿಂದ ಪ್ರಾರಂಭವಾಗಲಿದೆ.
ಕ್ಯಾಲಿಫೋರ್ನಿಯಾದಲ್ಲಿ ದಕ್ಷಿಣ ಏಷ್ಯಾದ ಅತಿದೊಡ್ಡ ಜನಸಂಖ್ಯೆ ವಾಸವಾಗಿದ್ದು, ಭಾರತೀಯ ಸಮುದಾಯವು ಹಲವು ವರ್ಷಗಳಿಂದ ದೀಪಾವಳಿಗೆ ಅಧಿಕೃತ ರಜಾದಿನದ ಬೇಡಿಕೆಯನ್ನು ಮುಂದಿಟ್ಟಿತ್ತು. 2024ರಲ್ಲಿ ಪೆನ್ಸಿಲ್ವೇನಿಯಾ ಈ ರಜಾದಿನವನ್ನು ಅಧಿಕೃತಗೊಳಿಸಿದ ಮೊದಲ ರಾಜ್ಯವಾಗಿದ್ದರೆ, ಕನೆಕ್ಟಿಕಟ್ ಎರಡನೇ ರಾಜ್ಯವಾಯಿತು. ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್ ನಗರದಲ್ಲಿ ಈಗಾಗಲೇ ದೀಪಾವಳಿ ದಿನ ಶಾಲಾ ರಜಾ ವ್ಯವಸ್ಥೆಯಿದೆ.
ಈಗ ಕ್ಯಾಲಿಫೋರ್ನಿಯಾ ಮೂರನೇ ರಾಜ್ಯವಾಗುವ ಸಾಧ್ಯತೆಯಿದ್ದು, ರಾಜ್ಯಪಾಲರ ಸಹಿಗೆ ಸಮುದಾಯ ಕಾತರದಿಂದ ಕಾಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa