ಹೊಸಪೇಟೆ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಜಾಪ್ರಭುತ್ವವು ಆಯಾ ದೇಶದ ಜನರಿಂದ ಶಕ್ತಿಯನ್ನು ಪಡೆಯುತ್ತದೆ. ಜನರ ಧ್ವನಿಗಳು, ಅವರ ಆಯ್ಕೆಗಳು ಮತ್ತು ಸಮಾಜಗಳನ್ನು ರೂಪಿಸುವಲ್ಲಿ ಅವರ ಭಾಗವಹಿಸುವಿಕೆ ಜತೆಗೆ ಹಕ್ಕುಗಳನ್ನು ರಕ್ಷಿಸಿದಾಗ ಮಾತ್ರ ಅದು ಅಭಿವೃದ್ಧಿ ಹೊಂದುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಸೋಮವಾರ ಮಾತನಾಡಿದರು.
ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿಯಲು ನನ್ನ ಮತ, ನನ್ನ ಹಕ್ಕು ಕುರಿತು ಜನಜಾಗೃತಿ ಮೂಡಿಸುವಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ತುಂಬಾ ಸಹಕಾರಿಯಾಗಲಿದೆ. ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಗೌರವಿಸಬೇಕು. ಅದರ ಆಶಯಗಳನ್ನು ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರಜಾಪ್ರಭುತ್ವವು ಜನರ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಒಂದು ಆಡಳಿತ ವ್ಯವಸ್ಥೆಯಾಗಿದೆ. ನಾಗರೀಕರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.
ಜವಾಬ್ದಾರಿಯುವ ಸರ್ಕಾರಗಳ ರಚನೆಗೆ ಪ್ರಾಮುಖ್ಯತೆ ನೀಡುತ್ತದೆ. ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉತ್ತಮ ಮಾರ್ಗಗಳನ್ನು ಒದಗಿಸುತ್ತದೆ. ಸಮಾಜದ ಎಲ್ಲಾ ವರ್ಗಗಳ ಸಮಾನತೆಗೆ, ಭಾಗವಹಿಸುವಿಕೆ ಉತ್ತೇಜಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಉತ್ತಮ ಜೀವನ ಗುಣಮಟ್ಟವನ್ನು ಉತ್ತೇಜನ ನೀಡಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಕ್ರಮ್ ಅಲಿ ಮಾತನಾಡಿ, ಪ್ರಜಾಪ್ರಭುತ್ವವು ದೇಶದ ನಾಗರೀಕರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಉತ್ತಮ ನ್ಯಾಯಯುತ ಮತ್ತು ಘನತೆಯ ಜೀವನವನ್ನು ಒದಗಿಸುವ ಒಂದು ಆಡಳಿತ ವ್ಯವಸ್ಥೆ ಆಗಿದೆ. ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಡಳಿತದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಭ್ರಷ್ಠಾಚಾರ, ಅಸಮಾನತೆ ಮತ್ತು ನಿರಂಕುಶಾಧಿಕಾರದಂತಹ ಸಮಸ್ಯೆಗಳನ್ನು ಪ್ರಜಾಪ್ರಭುತ್ವಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಬೆದರಿಕೆಗಳ ಜನರನ್ನು ಜಾಗೃತಿಗೊಳಿಸುತ್ತದೆ ಎಂದರು.
ಇದಕ್ಕೂ ಮುನ್ನಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಪ್ರಜಾಪ್ರಭುತ್ವ ದಿನ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಬಳಿಕ ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸೈಕಲ್ ಜಾಥಾ ಆರಂಭಗೊಂಡು ಸಾಯಿಬಾಬಾ ಸರ್ಕಲ್, ಎಪಿಎಂಸಿ ಸರ್ಕಲ್, ವಾಲ್ಮೀಕಿ ಸರ್ಕಲ್, ಮದಕರಿ ನಾಯಕ ಸರ್ಕಲ್, ಏಕ್ ಮಿನಾರ್, ಮಸೀದಿ, ಗಾಂಧಿ ಚೌಕ್, ಪುಣ್ಯಮೂರ್ತಿ ಸರ್ಕಲ್, ಪುನೀತ್ ರಾಜಕುಮಾರ ಸರ್ಕಲ್, ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾ ಒಳಂಗಾಣ ಕ್ರೀಡಾಂಗಣದವರೆಗೆ ಸೈಕಲ್ ರ್ಯಾಲಿ ಜಾಥಾವನ್ನು ನಡೆಸಲಾಯಿತು. ಸೈಕಲ್ ರ್ಯಾಲಿಯಲ್ಲಿ ಐದನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಟಿ.ಮಂಜುನಾಥ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಡಿಡಿಪಿಯು ನಾಗರಾಜ ಹವಲ್ದಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ.ಚಿದಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್