ರಾಯಚೂರು, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು.
ಮತದಾರ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಡಾ.ದಂಡಪ್ಪ ಬಿರಾದಾರ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಸರ್ಕಾರ. ಜನ ಪ್ರತಿನಿಧಿಗಳನ್ನು ಇಲ್ಲಿ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಸಲ, ನಮ್ಮ ಮತ ನಮ್ಮ ಹಕ್ಕು ಎನ್ನುವುದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಧ್ಯೇಯ ವಾಕ್ಯವಾಗಿದೆ.
ಮತದಾನ ನಮ್ಮ ಹಕ್ಕು. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಮತದಾನವು ಅತ್ಯಂತ ಮಹತ್ವದ್ದಾಗಿದೆ. ನಮ್ಮ ಮತ ನಮ್ಮ ಧ್ವನಿ ನಮ್ಮ ಶಕ್ತಿ ಆಗಿರುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬ ಮತದಾರರು ತಮಗೆ ಬೇಕಾದ ಜನನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಂವಿಧಾನಬದ್ಧವಾಗಿ ಕಲ್ಪಿಸಿರುವ ಮಹತ್ವದ ಹಕ್ಕು ಅದು ಮತದಾನದ ಹಕ್ಕಾಗಿದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವರಿಗೂ ಈ ಮತದಾನ ಹಕ್ಕಿನ ಅಧಿಕಾರ ಸಿಕ್ಕಿದೆ. ಈ ಮತದಾನದ ಹಕ್ಕನ್ನು ಪ್ರಜ್ಞಾವಂತಿಕೆಯಿಂದ ಬಳಸಬೇಕಿದೆ ಎಂದು ಹೇಳುವುದು ಈ ಪ್ರಜಾಪ್ರಭುತ್ವ ದಿನದ ಬಹುಮುಖ್ಯ ಸಂದೇಶವಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ಮಾತನಾಡಿ, ಮತದಾರರು ಮತದಾನ ದಿನದಂದು ಮತಗಟ್ಟೆಗೆ ಹೋಗಿ, ಪ್ರಜ್ಞಾವಂತಿಕೆಯಿಂದ ಮತದಾನ ಮಾಡಿ, ಉತ್ತಮ ನಾಯಕರನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನಕ್ಕೆ ಸಾಕಷ್ಟು ಮಹತ್ವವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಪಾಂಡುರಂಗ ದೇಸಾಯಿ, ನಫೀಜಾ ಅಂಜುಮ್, ವೀಣಾ ಕುಲಕರ್ಣಿ, ಶಿವಲೀಲಾ, ಸರಸ್ವತಿ, ಪದ್ಮಾವತಿ, ಸಾವಿತ್ರಿ, ಅನಿತಾ ಎನ್ ಹಾಗೂ ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಭಾರತಿ, ಪ್ರೀತಿ, ಹುಸೇನ್ ಭಾನು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿ ನೀಲಕಂಠ ಕಾರ್ಯಕ್ರಮ ನಿರ್ವಹಿಸಿದರು. ಪರಮೇಶ್ ಸ್ವಾಗತಿಸಿದರು. ಎನ್‍ಜಿಒ ಸಂಸ್ಥೆಯ ನರಸಪ್ಪ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್