ಬೆಂಗಳೂರು, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಸರ್ಕಾರಿ ಸಾರಿಗೆ ನಿಗಮಗಳ ನೌಕರರು ವೇತನ ಪರಿಷ್ಕರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾಳೆಯಿಂದ ಮುಷ್ಕರ ಆರಂಭಿಸಲಿದ್ದಾರೆ.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಮಾತುಕತೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.
ಸಭೆಯಲ್ಲಿ ಅಧಿವೇಶನದ ನಂತರ ನೌಕರರ ಬೇಡಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿಕೆಗೆ ನೌಕರರ ಒಕ್ಕೂಟ ಒಪ್ಪಿಲ್ಲ, ಹೀಗಾಗಿ ರಾಜ್ಯಾದ್ಯಂತ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದ್ದು, ಸುಮಾರು 1.15 ಲಕ್ಷ ಸಾರಿಗೆ ನೌಕರರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ನೌಕರರ ಬೇಡಿಕೆಗಳು:
38 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. 2024ರ ಜನವರಿ 1ರಿಂದ ಹೊಸ ವೇತನ ಪರಿಷ್ಕರಣೆ ಜಾರಿಗೆ ತರಬೇಕು.
ಖಾಸಗೀಕರಣ, ಭ್ರಷ್ಟಾಚಾರ, ಹಾಗೂ ಕಾರ್ಮಿಕರ ಮೇಲಿನ ಕಿರುಕುಳಗಳನ್ನು ನಿಲ್ಲಿಸಬೇಕು. ವಿದ್ಯುತ್ ಚಾಲಿತ ಬಸ್‌ಗಳಲ್ಲಿ ಸರ್ಕಾರಿ ಚಾಲಕರನ್ನೇ ನೇಮಿಸಬೇಕು.
ಈ ನಡುವೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸ್ವೀಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ದಿನ ಮುಷ್ಕರವನ್ನು ಮುಂದೂಡಲು ಸೂಚನೆ ನೀಡಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಹೆಚ್.ವಿ. ಅನಂತಸುಬ್ಬರಾವ್ ನ್ಯಾಯಾಲಯದ ಆದೇಶದ ಪ್ರತಿ ನಮಗೆ ಲಭ್ಯವಾಗಿಲ್ಲ ಎಂಬ ಕಾರಣ ನೀಡಿ ಮುಷ್ಕರ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ತುರ್ತು ಕ್ರಮಗಳು:
ಈ ಎಲ್ಲ ಬೆಳವಣಿಗೆಗಳ ನಡುವೆ ಸಾರಿಗೆ ಇಲಾಖೆ
ಇಂದಿನಿಂದ ಎಲ್ಲಾ ನೌಕರರ ರಜೆಗಳ ರದ್ದುಗೊಳಿಸಿ ಸುತ್ತೋಲೆ ಹೊರಡಿಸಿದ್ದು, ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರಾಗುವ ನೌಕರರ ವೇತನ ಕಡಿತ ಮಾಡುವ ಕುರಿತು ಸೂಚನೆ ನೀಡಲಾಗಿದೆ.
ಅಗತ್ಯವಿದ್ದರೆ ವಾರದ ರಜೆ ಕೂಡ ರದ್ದುಪಡಿಸುವಂತೆ ರಾಜ್ಯದ ನಾಲ್ಕು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಜನಸಾಮಾನ್ಯರು ತಮ್ಮ ದಿನಚರಿಯನ್ನು ಅದರ ಅನುಸಾರ ರೂಪಿಸಿಕೊಂಡು, ಪರ್ಯಾಯ ಪ್ರಯಾಣದ ಮಾರ್ಗಗಳನ್ನು ಯೋಜಿಸುವುದು ಅತ್ಯವಶ್ಯಕವಾಗಿದೆ. ಮುಷ್ಕರ ಸಂಬಂಧಿತ ಮುಂದಿನ ಬೆಳವಣಿಗೆಗಳು, ಆ.5ರಂದು ನ್ಯಾಯಾಲಯ ಹಾಗೂ ಸರ್ಕಾರದ ಮುಂದಿನ ಕ್ರಮದ ಮೇಲೆ ನಿರ್ಧರಿತವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa