ಬೆಂಗಳೂರು, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೆಜ್ಜೆ ಇಡುತ್ತಿರುವ ರವಿ ಗೌಡ ಅಭಿನಯದ ‘I’m God’ ಸಿನಿಮಾ ತನ್ನ ಮೊದಲ ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ.
ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಪ್ರಮೋಶನ್ ಪೋಸ್ಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು, ತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ಬಿಡುಗಡೆಯಾದ ಹಾಡಿಗೆ ಯುವ ಗಾಯಕ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತ್ಯವನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ. ಯುವಕರಿಗೆ ಆಕರ್ಷಕವಾಗುವ ರೀತಿಯಲ್ಲಿ ಪ್ರೀತಿ ಅನುಭವವನ್ನು ಈ ಹಾಡಿನಲ್ಲಿ ಮೂಡಿಸಲಾಗಿದೆ.
ನಟ ಹಾಗೂ ನಿರ್ದೇಶಕ ರವಿ ಗೌಡ ಈ ಕುರಿತು ಮಾತನಾಡಿ, ಈ ಹಾಡಿನಲ್ಲಿ ಹುಡುಗಿ ಮೇಲೆ ಪ್ರೀತಿ ಆದ ನಂತರದ ಅನುಭವಗಳನ್ನು ತೋರಿಸಲಾಗಿದೆ. ಅಜನೀಶ್ ಅವರ ಸಂಗೀತ ಹಾಗೂ ಸಂಚಿತ್ ಹೆಗ್ಡೆ ಧ್ವನಿ ಹಾಡಿಗೆ ಮತ್ತಷ್ಟು ಉತ್ತೇಜನ ತಂದಿದೆ ಎಂದು ತಿಳಿಸಿದ್ದಾರೆ.
‘I’m God’ ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಬೆಂಗಳೂರು ಮತ್ತು ಕೇರಳದಲ್ಲಿ ಚಿತ್ರಿಕರಣ ಪೂರ್ಣಗೊಂಡಿದೆ. ನಾಯಕ ರವಿ ಗೌಡ ಅವರ ಜತೆ ನಟಿಯಾಗಿ ವಿತೇಜಾ ಪರೀಕ್ ಪರಿಚಯವಾಗುತ್ತಿದ್ದಾರೆ. ಜೊತೆಗೆ ಹಿರಿಯ ನಟ ಅವಿನಾಶ್, ರವಿಶಂಕರ್, ಅರುಣ ಬಾಲರಾಜ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರಿಕರಣ ತಂಡ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತೊಡಗಿಸಿಕೊಂಡಿದ್ದು, ಈ ವರ್ಷದ ಕೊನೆಯೊಳಗೆ ಚಿತ್ರ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa