ಬಳ್ಳಾರಿ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿರುವ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ತಿಳಿಯಲು ಹೊಸ ಜಾತಿ ಗಣತಿಯಲ್ಲಿ `ಆಧಾರ್ ಲಿಂಕ್' ಮಾಡಬೇಕು ಎಂದು ಶೋಷಿತ ವರ್ಗಗಳ ಮಹಾ ಒಕ್ಕೂಟದ ಚಿಂತಕ ಅನಂತ ನಾಯ್ಕ ಅವರು ಮನವಿ ಮಾಡಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಶೋಷಿತ ವರ್ಗಗಳ ಸೌಹಾರ್ದ ಸಮ್ಮಿಲನ ಸಭೆಯಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಅಂಕಿ ಅಂಶದ ಆಧಾರದ ಮೇಲೆ ಕೈಗೊಳ್ಳಬೇಕಿದ್ದ ಮೀಸಲಾತಿಯ ಪ್ರಮಾಣವನ್ನು ಶಿಫಾರಸು ಮಾಡಿದ್ದ ನ್ಯಾ. ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ನಿಸ್ತೇಜಗೊಳಿಸಿದ್ದು ಪ್ರಜಾಪ್ರಭುತ್ವದ ವಿಪರ್ಯಾಸ ಎಂದರು.
ಮುಂದಿನ ಹೊಸ ಜಾತಿ ಸಮೀಕ್ಷೆಯ ವರದಿ ಸ್ವೀಕಾರ ಸಮಯದಲ್ಲಿ ಈ ಸಮಸ್ಯೆ ಪುನರಾವರ್ತನೆ ಆಗಬಾರದು. ಕಾರಣ ಆಧಾರ್ ಕಾರ್ಡ್ ಲಿಂಕ್ ವ್ಯವಸ್ಥೆಯಲ್ಲಿ ಜಾತಿಗಣತಿ ನಡೆಯಬೇಕು. ಆಗಲೇ, ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ನ್ಯಾಯ, ದೊರಕಬೇಕಾದ ಸೌಲಭ್ಯಗಳು ಖಂಡಿತವಾಗಿಯೂ ಸಿಗುತ್ತವೆ ಎಂದರು.
ವಿ.ಪಿ. ಸಿಂಗ್ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಶಿಫಾರಸನ್ನು ಹೊಂದಿದ್ದ ಮಂಡಲ್ ವರದಿಯನ್ನು ಜಾರಿಗೊಳಿಸಲು ಪ್ರಯತ್ನಿಸಿದಾಗ ನಡೆದ ಬೆದರಿಕೆಯ ಅನೇಕ ಘಟನೆಗಲು ಬಲಾಢ್ಯ ಸಮುದಾಯಗಳಿಂದ ಈಗಲೂ ಮುಂದುವರೆದಿದೆ. ಬಲಾಢ್ಯರ ಒತ್ತಡ ಮತ್ತು ಕುತಂತ್ರಗಳ ನಡುವೆಯೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸದಾಗಿ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ. ಇದು ಆಶಾದಾಯಕ ಬೆಳವಣಿಗೆ ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಪ್ರತಿನಿಧಿ ತೋಳಿ ಭರಮಣ್ಣ, ಇರ್ಫಾನ್ ಮುದಗಲ್, ಪ್ರಗತಿಪರ ಹೋರಾಟಗಾರ ಸಂಗನಕಲ್ ವಿಜಯಕುಮಾರ್, ಶೋಷಿತ ಸಮುದಾಯದ ಜಿಲ್ಲಾಧ್ಯಕ್ಷ ಗಾದಲಿಂಗನಗೌಡ, ದಲಿತ ಹೋರಾಟಗಾರ ಎ. ಮಾನಯ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಮಾಜಿ ಉಪ ಮಹಾಪೌರ ಬೆಣಕಲ್ ಬಸವರಾಜ ಗೌಡ, ರೈತ ಹೋರಾಟಗಾರ ವಿ.ಎಸ್. ಶಿವಶಂಕರ್, ವಾಲ್ಮೀಕಿ ಸಮುದಾಯದ ವಿ.ಕೆ. ಬಸಪ್ಪ, ಬಲಿಜ ಸಮುದಾಯದ ಸರಗೂ ನಾಗರಾಜ್, ಕೊಳಗಲ್ಲು ಉಪ್ಪಾರ ಎರ್ರಿಸ್ವಾಮಿ, ನೇಕಾರ ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ದೇವಣ್ಣ, ಯಾದವ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿದಾನಂದಪ್ಪ ಯಾದವ್, ಕುಂಬಾರ ಸಮುದಾಯದ ಎರ್ರಿಸ್ವಾಮಿ, ಪಿ. ಜಗನ್ನಾಥ್, ಲೋಕೇಶ್, ಗಂಗಪ್ಪ, ವಿಶ್ವಕರ್ಮ ಸಮುದಾಯದ ಚಂದ್ರು, ಮಹಾನಗರ ಪಾಲಿಕೆ ಸದಸ್ಯರಾದ ಹೊನ್ನಪ್ಪ, ನಾಗಲಕರೆ ಗೋವಿಂದ, ಭೋವಿ ಸಮಾಜದ ಜಿಲ್ಲಾಧ್ಯಕ್ಷರಾದ ರಾಮಾಂಜಿನಿ, ಗುಡುದುರು, ಅಲ್ಲೀಪುರ ವೆಂಕಟಸ್ವಾಮಿ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್