ಪ್ರಜ್ವಲ್ ರೇವಣ್ಣ ಅಪರಾಧಿ : ವಿಶೇಷ ನ್ಯಾಯಾಲಯ ತೀರ್ಪು
ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಕುಟುಂಬಕ್ಕೆ ಆಘಾತ
Prajwal


ಬೆಂಗಳೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮೈಸೂರಿನ ಕೆ.ಆರ್. ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೆಡಿಎಸ್ ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ, ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ ನಾಳೆ ಆಗಸ್ಟ್ ೨ರಂದು ಪ್ರಕಟಿಸಲಿದ್ದಾರೆ.

ಈ ಪ್ರಕರಣದ ವಿಚಾರಣೆ ಜುಲೈ 29ರಂದು ಪೂರ್ಣಗೊಂಡಿದ್ದು, ತೀರ್ಪು ಪ್ರಕಟಣೆಯನ್ನು ನ್ಯಾಯಾಲಯ ಆಗಸ್ಟ್ 1ಕ್ಕೆ ಮುಂದೂಡಿತ್ತು.

ತೀರ್ಪು ಘೋಷಣೆಯ ಬಳಿಕ ಕಣ್ಣೀರು ಹಾಕುತ್ತಾ ಪ್ರಜ್ವಲ್ ರೇವಣ್ಣ ಕೋರ್ಟ್ ಹಾಲಿನಿಂದ ಹೊರನಡೆದಿರುವ ದೃಶ್ಯಗಳು ಕಂಡುಬಂದವು.

ಪ್ರಜ್ವಲ್ ರೇವಣ್ಣಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇನ್ನೂ ಪ್ರಕಟಿಸಿಲ್ಲ. ಆದರೆ, ಕಾನೂನು ಪ್ರಕಾರ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಸಾಕ್ಷ್ಯಗಳ ಕುರಿತ ವಿವಾದ ವಿಚಾರಣೆಯಲ್ಲಿ ಗೂಗಲ್ ಮ್ಯಾಪ್‌ನಲ್ಲಿನ ಸ್ಥಳ ಮಾಹಿತಿ ಹಾಗೂ ವಶಕ್ಕೆ ತೆಗೆದುಕೊಳ್ಳಲಾದ ಮೊಬೈಲ್‌ ಫೋನ್ ಬಗ್ಗೆ ನ್ಯಾಯಾಲಯ ಸ್ಪಷ್ಟತೆ ಕೇಳಿತ್ತು. ಇದರಂತೆ ಪ್ರಾಸಿಕ್ಯೂಷನ್ ಗೂಗಲ್ ಮ್ಯಾಪ್ ಸ್ಥಳಗಳ ವಿವರಣೆಗಳೊಂದಿಗೆ 2021ರ ಫೋಟೋಗಳನ್ನು ದಾಖಲೆಗಾಗಿ ಸಲ್ಲಿಸಿದ್ದರು ಆದರೆ ಪ್ರಜ್ವಲ್ ಪರ ವಕೀಲರು ಈ ಸಾಕ್ಷಿಗಳು ಪ್ರಕರಣಕ್ಕೆ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದರು.

ಪ್ರಕರಣದ ಹಿನ್ನೆಲೆ

ಪ್ರಜ್ವಲ್ ರೇವಣ್ಣ ವಿರುದ್ಧ ಸಾಲುಸಾಲು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧದ ಪ್ರಮುಖ ಪ್ರಕರಣ ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ. ಆರೋಪದಂತೆ ಮಹಿಳೆಯನ್ನು ಅಪಹರಿಸಿ, ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು.

ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳಿದ್ದು, ಅದರಲ್ಲಿ ಪ್ರಜ್ವಲ್ ತಂದೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣಗೆ ಈಗಾಗಲೇ ಜಾಮೀನು ದೊರೆತಿದೆ.

ಪ್ರಜ್ವಲ್ ರೇವಣ್ಣ ಅವರನ್ನು 2024ರ ಮೇ 31ರಂದು ಬಂಧಿಸಲಾಗಿತ್ತು, ಅದಾದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಪ್ರಕರಣ ಅವರ ರಾಜಕೀಯ ಭವಿಷ್ಯಕ್ಕೆ ತೀವ್ರ ಪರಿಣಾಮ ಬೀರಿದ್ದು, ದೇವೆಗೌಡ ಕುಟುಂಬಕ್ಕೆ ಆಘಾತ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande