ಕೋಲಾರ, 09 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕ ಗ್ರಾಮೀಣ ಬ್ಯಾಂಕ್ ರಾಷ್ಟ್ರಮಟ್ಟದ ಸಂಘಟನೆಯಾದ ಎ.ಐ.ಆರ್.ಬಿ.ಇ.ಎ ಮತ್ತು ಎಲ್ಲಾ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ ಭಾಗವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಂಘಟನೆಗಳಾದ ಕೆ.ಜಿ.ಬಿ.ಓ.ಎ, ಕೆ.ಜಿ.ಬಿ.ಇ.ಯು ಮತ್ತು ಕೆ.ಜಿ.ಬಿ ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಬ್ಯಾಂಕಿನ ವಲಯ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಿದರು.
ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ಮುಖ್ಯವಾಗಿ ಕಾರ್ಮಿಕರ ರಕ್ಷಣೆಗಾಗಿ ಇದ್ದ ೨೦ ಕಾಯ್ದೆಗಳನ್ನು ತೆಗೆದು ಎಂಟು ಗಂಟೆಗಳ ಕೆಲಸದ ಅವದಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತಾ ಮುಷ್ಕರದ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲದಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೋರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಲಾಯಿತು.
೧೯೬೯ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ೧೯ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಆದರೆ ಇಂದಿನ ಬಿಜೆಪಿಯ ಕೇಂದ್ರ ಸರ್ಕಾರ ಅವುಗಳನ್ನು ಮತ್ತು ಸರ್ಕಾರ ಸ್ವಾಮ್ಯದ ಎಲ್ಲಾ ಹಣಕಾಸು ಸಂಸ್ಥೆಗಳನ್ನು ಕಾರ್ಪೋರೇಟ್ ಬಂಡವಾಳ ಶಾಹಿಗಳಿಗೆ ಮಾರಲು ಹೊರಟಿದೆ. ಎಲ್ಲಾ ಸಿಬ್ಬಂದಿ ಇದರ ವಿರುದ್ಧ ಹೋರಾಡಲು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ವೆಂಕಟರಾಮಪ್ಪ ಕರೆ ನೀಡಿದರು.
೧೯೯೦ ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಖಾಸಗಿಕರಣ, ಜಾಗತೀಕರಣ, ಉದಾರಿ ಆರ್ಥಿಕ ನೀತಿಗಳ ಪರಿಣಾಮವಾಗಿ ಅವರ ಅವಧಿಯಲ್ಲಿ ಖಾಸಗೀಕರಣ ಮತ್ತು ಆರ್ಥಿಕ ಉದಾರೀಕರಣ ಮಂದಗತಿಯಲ್ಲಿ ಸಾಗುತ್ತಿದ್ದರೂ ಸಹ ಇಂದಿನ ಕೇಂದ್ರ ಸರ್ಕಾರ ಅದನ್ನು ತೀವ್ರಗತಿಯಲ್ಲಿ ಅನಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದೆ.
ಕೇಂದ್ರ ಸರ್ಕಾರ ಜಾರಿಗೆ ಮಾಡಲು ಬಯಸಿರುವ ಕಾರ್ಮಿಕ ವಿರುದ್ಧವಾದ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದ ದಿನದಿಂದ ಕಾರ್ಮಿಕರ ಕರಾಳ ದಿನಗಳ ಪ್ರಾರಂಭವಾಗುತ್ತದೆ. ಕಾರ್ಮಿಕರಿಗಿದ್ದ ಹಕ್ಕುಗಳಾದ ೮ ಗಂಟೆಗಳ ಕೆಲಸದ ಅವಧಿ, ಕಾಯಂ ಉದ್ಯೋಗ, ಕೆಲಸಕ್ಕೆ ತಕ್ಕ ವೇತನದ ಒಪ್ಪಂದಗಳು ಮತ್ತು ಮುಷ್ಕರದ ಹಕ್ಕುಗಳನ್ನು ಕಳೆದುಕೊಂಡು ಗುಲಾಮರಾಗಿ ಬದುಕಬೇಕಾಗುತ್ತದೆ. ಇದು ನಮ್ಮ ಮುಂದಿನ ಪೀಳಿಗೆಗಳಿಗೂ ಶಾಪವಾಗುತ್ತದೆ ಅದ್ದರಿಂದ ಕೇಂದ್ರ ಸರ್ಕಾರ ಜಾರಿ ಮಾಡಬೇಕೆಂದಿರುವ ಕಾರ್ಮಿಕ ವಿರುದ್ಧವಾದ ನಾಲ್ಕು ಸಂಹಿತೆಗಳನ್ನು ವಾಪಸ್ ಪಡೆಯಬೇಕೆಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೋಲಾರ ವಲಯ ಕಾರ್ಯದರ್ಶಿ ಹೆಚ್.ಬಿ ಕೃಷ್ಣಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನಮ್ಮ ಬ್ಯಾಂಕಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಿಬ್ಬಂದಿ ನೇಮಕವಾಗುತ್ತಿಲ್ಲ ಇದರ ಪರಿಣಾಮವಾಗಿ ಈಗಿನ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಹೇರಲಾಗಿದೆ. ಸುಮಾರು ೧೫, ೨೦ ವರ್ಷಗಳಿಂದ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಕಾಯಂಗೊಳಿಸುತ್ತಿಲ್ಲ ಅವರನ್ನು ಕಾಯಂಗೊಳಿಸಬೇಕೆಂದು, ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣವನ್ನು ನಿಲ್ಲಿಸಬೇಕೆಂದು ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಕೈಬಿಡಬೇಕೆಂದು, ಗ್ರಾಮೀಣ ಬ್ಯಾಂಕುಗಳನ್ನು ಪ್ರೇರಕ ಬ್ಯಾಂಕುಗಳಿಂದ ಬೇರ್ಪಡಿಸಿ ಭಾರತೀಯ ರಾಷ್ಟ್ರೀಯ ಗ್ರಾಮೀಣ ಬ್ಯಾಂಕನ್ನು ಅನುಷ್ಟಾನಕ್ಕೆ ತರಬೇಕೆಂದು ಕೆ.ಜಿ.ಬಿ.ಓ.ಎ ನ ಮುಖಂಡ ಗಟ್ಟಾಲ ಗಣೇಶ್ ಒತ್ತಾಯಿಸಿದರು.
ಕೆ.ಜಿ.ಬಿ.ಓ.ಎ ನ ಸಹಾಯಕ ಕಾರ್ಯದರ್ಶಿ ಎನ್.ಶ್ರೀನಿವಾಸ್, ಕೆ.ಜಿ.ಬಿ.ಓ.ಎನ ಜಿಲ್ಲಾಧ್ಯಕ್ಷ ಷಣ್ಮುಖ, ಕಾರ್ಯದರ್ಶಿ ಹರೀಶ್, ಕೆ.ಜಿ.ಬಿ.ಯು.ಇನ ಜಿಲ್ಲಾಧ್ಯಕ್ಷ ಭಾನುಪ್ರಕಾಶ್, ಕೇಂದ್ರ ಸರ್ಕಾರ ಜಾರಿ ಮಾಡಬೇಕೆಂದಿರುವ ಕಾರ್ಮಿಕ ವಿರುದ್ಧವಾದ ನಾಲ್ಕು ಸಂಹಿತೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಮುಷ್ಕರದಲ್ಲಿ ಬ್ಯಾಂಕಿನ ಕಾರ್ಮಿಕ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ