ಯಲಬುರ್ಗಾ, 05 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಯಲಬುರ್ಗಾದಲ್ಲಿ ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ. ಪ್ರೊಬೇಷನ್ ಅಧಿಕಾರಿ ಶಿವಲೀಲಾ ವನ್ನೂರು, ಅವರು ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಶಾಲೆ ಬಿಟ್ಟ ಮಕ್ಕಳ ಬಗ್ಗೆ, ಲೈಂಗಿಕ ದೌರ್ಜನ್ಯ ಹೀಗೆ ಮಕ್ಕಳ ಮೇಲೆ ಆಗುವ ದೌರ್ಜನ್ಯ ಹಾಗೂ ಕಿರುಕುಳ ಅವುಗಳ ದುಷ್ಪರಿಣಾಮ ಹಾಗೂ ಅಂತಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳು ಕುರಿತು ಮಾಹಿತಿ ನೀಡಿದರು.
ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಿರುತ್ತದೆ. ಈ ಕುರಿತು ಕೇವಲ ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸಿದರೆ ಸಾಲದು, ಸಾರ್ವಜನಿಕರ ಸಹಭಾಗಿತ್ವವು ಅತೀ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳ ಕುರಿತು ಆಪ್ತ ಸಮಾಲೋಚಕರಾದ ರವಿ ಬಡಿಗೇರ ಅವರು ಮಾತನಾಡಿದರು. ಮಕ್ಕಳ ಕ್ಷೇತ್ರದಲ್ಲಿ ರಕ್ಷಣಾತ್ಮಕ ಬೆಂಬಲ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಇಲಾಖೆಗಳ ಕುರಿತು ಮಕ್ಕಳ ಸಹಾಯವಾಣಿ-1098/112 ನ ವಿಷಯ ನಿರ್ವಾಹಕರಾದ ಬಸವರಾಜ ಗುಳೇದ್ ಅವರು ಮಾಹಿತಿ ನೀಡಿದರು.
ಯಲಬುರ್ಗಾ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಈಶಪ್ಪ, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್