ಮೇಕ್‌ ಇನ್‌ ಇಂಡಿಯಾʼಗೆ ಪಿಎಲ್‌ಐ ಬಾಹುಳ್ಯ
ಬೆಂಗಳೂರು, 03 ಜುಲೈ (ಹಿ.ಸ.) : ಆ್ಯಂಕರ್ : ಕಳೆದೊಂದು ದಶಕದಿಂದ ದೇಶೀಯ ಉತ್ಪಾದನೆ, ಉದ್ಯೋಗ ಸೃಷ್ಟಿ, ಆರ್ಥಿಕ ಸ್ವಾವಲಂಬನೆ ಸಾಧಿಸಿ ʼಆತ್ಮ ನಿರ್ಭರʼ ಆಗಿರುವ ಭಾರತಕ್ಕೆ ಸರ್ಕಾರದ ಮಹತ್ವಾಕಾಂಕ್ಷೆಯ ಉತ್ಪಾದನಾ ಸಂಪರ್ಕಿತ ಉತ್ತೇಜನ ಯೋಜನೆ (ಪಿಎಲ್‌ಐ) ಬಲ ನೀಡಿದೆ. ಜಾಗತಿಕ ಮಟ್ಟದಲ್ಲಿ ʼಮೇಕ್‌ ಇನ್‌ ಇಂಡ
Pli


ಬೆಂಗಳೂರು, 03 ಜುಲೈ (ಹಿ.ಸ.) :

ಆ್ಯಂಕರ್ : ಕಳೆದೊಂದು ದಶಕದಿಂದ ದೇಶೀಯ ಉತ್ಪಾದನೆ, ಉದ್ಯೋಗ ಸೃಷ್ಟಿ, ಆರ್ಥಿಕ ಸ್ವಾವಲಂಬನೆ ಸಾಧಿಸಿ ʼಆತ್ಮ ನಿರ್ಭರʼ ಆಗಿರುವ ಭಾರತಕ್ಕೆ ಸರ್ಕಾರದ ಮಹತ್ವಾಕಾಂಕ್ಷೆಯ ಉತ್ಪಾದನಾ ಸಂಪರ್ಕಿತ ಉತ್ತೇಜನ ಯೋಜನೆ (ಪಿಎಲ್‌ಐ) ಬಲ ನೀಡಿದೆ. ಜಾಗತಿಕ ಮಟ್ಟದಲ್ಲಿ ʼಮೇಕ್‌ ಇನ್‌ ಇಂಡಿಯಾʼ ಆಗಿ ರೂಪುಗೊಳ್ಳುವಲ್ಲಿ ಪಿಎಲ್‌ಐ ಮಹತ್ತರ ಪಾತ್ರ ವಹಿಸಿವೆ. ಇದರ ಫಲವಾಗಿ ಭಾರತ ಭವಿಷ್ಯದಲ್ಲಿ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಪಥದಲ್ಲಿ ಸಾಗಿದೆ.

ʼಮೇಕ್ ಇನ್ ಇಂಡಿಯಾʼದ ಸಾಧನಾ ಪರ್ವ ಎನ್ನುವಂತೆ ಐದಾರು ವರ್ಷದಲ್ಲೇ ಭಾರತ 14 ಪಿಎಲ್‌ಐ ಯೋಜನೆಗಳ ಮೂಲಕ ₹1.76 ಲಕ್ಷ ಕೋಟಿ ಹೂಡಿಕೆ ಮಾಡಿದ್ದು, ₹16.5 ಲಕ್ಷ ಕೋಟಿ ಮೌಲ್ಯದ ಉತ್ಪಾದನಾ ಸಾಮರ್ಥ್ಯ ಸಾಧಿಸಿದೆ. ಅಲ್ಲದೇ, 12 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿ ಕೈಗಾರಿಕಾ ಭದ್ರತೆ ಜತೆಗೆ ಆರ್ಥಿಕ ಬೆಳವಣಿಗೆಯಲ್ಲಿ ಹೊಸ ಹೆಜ್ಜೆಯಿರಿಸುತ್ತ ಸಾಗಿದೆ.

ʻಆತ್ಮನಿರ್ಭರ ಭಾರತʼದ ಮೊದಲ ಹೆಜ್ಜೆ ಎನ್ನುವಂತೆ ಕೇಂದ್ರ ಸರ್ಕಾರ 2020ರಲ್ಲಿ ಪ್ರಾರಂಭಿಸಿದ ಉತ್ಪಾದನಾ ಸಂಪರ್ಕಿತ ಉತ್ತೇಜನ ಯೋಜನೆ (ಪಿಎಲ್ಐ) ದೇಶದ ಕೈಗಾರಿಕಾ ಬೆಳವಣಿಗೆಗೆ ಹೆದ್ದಾರಿ ನಿರ್ಮಿಸಿಕೊಟ್ಟಿದ್ದಲ್ಲದೆ, ರಾಷ್ಟ್ರದ ಆರ್ಥಿಕ ಪ್ರಗತಿಗೂ ಚಾಲನೆ ನೀಡಿದೆ. ಮುಂದಿನ 5 ವರ್ಷಗಳಲ್ಲಿ ಮತ್ತಷ್ಟು ಹೂಡಿಕೆ ಜತೆಗೆ ಪ್ರೋತ್ಸಾಹ ಮೊತ್ತವನ್ನು ಸಹ ಹೆಚ್ಚಿಸುವ ನಿರೀಕ್ಷೆಯಲ್ಲಿದೆ.

ಕೇಂದ್ರ ಸರ್ಕಾರ ಪಿಎಲ್‌ಐ ಯೋಜನೆಗಳಡಿ ಈಗಾಗಲೇ ₹21,534 ಕೋಟಿ ಪ್ರೋತ್ಸಾಹ ಮೊತ್ತವನ್ನು ವಿವಿಧ 12 ಕ್ಷೇತ್ರಗಳಿಗೆ ವಿತರಿಸಿದೆ. ಆಹಾರೋತ್ಪನ್ನ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆ, ಐಟಿ ಹಾರ್ಡ್‌ವೇರ್, ಔಷಧಗಳು, ತಾಂತ್ರಿಕ ಸಲಕರಣೆಗಳು, ಆಟೋಮೊಬೈಲ್, ಉಕ್ಕು, ಜವಳಿ ಕೈಗಾರಿಕೆ, ಡ್ರೋನ್‌ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಿಗೆ ಅಗತ್ಯ ಪ್ರೋತ್ಸಾಹ ನೀಡಿ ಉತ್ತೇಜಿಸುತ್ತಿದೆ.

*ಆಹಾರೋತ್ಪನ್ನ ವಲಯದಲ್ಲಿ 3.4 ಲಕ್ಷ ಉದ್ಯೋಗ:* ಭಾರತದಲ್ಲಿ ಆಹಾರೋತ್ಪನ್ನ ವಲಯ ಅಗಾಧವಾಗಿ ಬೆಳೆವಣಿಗೆ ಕಂಡಿದೆ. ಆಹಾರ ಉತ್ಪನ್ನಗಳ ತಯಾರಿಕಾ ಕ್ಷೇತ್ರದಲ್ಲಿ ₹9,032 ಕೋಟಿ ಹೂಡಿಕೆಯಾಗಿ ಬರೋಬ್ಬರಿ ₹3.8 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಈ ಕ್ಷೇತ್ರವೊಂದರಲ್ಲೇ 3.4 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.

ದೇಶೀಯವಾಗಿ ಕೃಷಿ ಉತ್ಪನ್ನಗಳ ಬಳಕೆಗೂ ಹೆಚ್ಚಿನ ಬೆಂಬಲ ನೀಡಿದ್ದು, ರೈತರ ಆದಾಯ ವೃದ್ಧಿಸುವಲ್ಲಿ ಸಹ ಸಹಕಾರಿಯಾಗಿದೆ. ಪಿಎಲ್‌ಐ ಯೋಜನೆಯಡಿ ನೇರವಾಗಿ ನೋಂದಾಯಿತವಾದ 70 ಎಂಎಸ್ಎಂಇಗಳು ಹಾಗೂ 40ಕ್ಕೂ ಅಧಿಕ ನಿಯೋಜಿತ ತಯಾರಕರಿದ್ದಾರೆ. ಪ್ರಮುಖ ಫಲಾನುಭವಿಗಳಲ್ಲಿ ಅನೇಕರು ದೊಡ್ಡ ಕಂಪನಿಗಳಿಗೆ ಗುತ್ತಿಗೆ ತಯಾರಿಕರಾಗಿದ್ದು, ಸಣ್ಣ ಉದ್ಯಮಗಳಿಗೆ ಹೊಸ ಬೆಳಕು ತೋರಿದೆ.

*ಮಿಲೆಟ್‌ ಉತ್ಪನ್ನ ದ್ವಿಗುಣ:*

ಪಿಎಲ್‌ಐ ಮಿಲೆಟ್ ಯೋಜನೆ ಪ್ರಾರಂಭವಾಗಿದ್ದೇ ತಡ ದೇಶದ ಮಿಲೆಟ್ ಆಧಾರಿತ ಉತ್ಪನ್ನಗಳ ಮಾರಾಟ 25 ಪಟ್ಟು ಹೆಚ್ಚಳ ಕಂಡಿದೆ. 2023ರಲ್ಲಿ 4,081 ಮೆಟ್ರಿಕ್ ಟನ್‌ ಮಿಲೆಟ್ ಖರೀದಿಯಾಗಿದ್ದರೆ, 2025ರಲ್ಲಿ ಅದು ಬರೋಬ್ಬರಿ 16,130 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಇದು ಸ್ಥಳೀಯ ಕೃಷಿಕರಿಗೆ ನೇರ ಲಾಭ ತರುತ್ತಿದೆ. ಇದೇ ರೀತಿ, ಮೌಲ್ಯವರ್ಧಿತ ಸಮುದ್ರ ಉತ್ಪನ್ನಗಳ ಮಾರಾಟವೂ ವಾರ್ಷಿಕ ಶೇ.22ರಷ್ಟು ಪ್ರಗತಿಯಲ್ಲಿದೆ. ಇದು ಭಾರತವನ್ನು ಜಾಗತಿಕ ಉತ್ಪಾದನಾ ನಾಯಕನನ ಸ್ಥಾನಕ್ಕೆ ಕೊಂಡುತ್ತಿದೆ.

*ಫಾರ್ಮಾ, ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳಲ್ಲಿ ಸುನಾಮಿ:* ಔಷಧೋತ್ಪನ್ನ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸಿದೆ. ಪಿಎಲ್‌ಐ ಜಾರಿಗೊಂಡ ಮೊದಲ ಮೂರು ವರ್ಷಗಳಲ್ಲೇ ₹2.66 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದ್ದು, ₹1.70 ಲಕ್ಷ ಕೋಟಿ ಮೌಲ್ಯದ ರಫ್ತು ನಡೆದಿದೆ. 2024-25ರಲ್ಲೇ ₹0.67 ಲಕ್ಷ ಕೋಟಿ ಮೌಲ್ಯದ ರಫ್ತು ಆಗಿದ್ದು, ದೇಶದ ಒಟ್ಟು ರಫ್ತಿನಲ್ಲಿ ಶೇ.27ರಷ್ಟು ಔಷಧ ಉತ್ಪನ್ನ ರಫ್ತು ದಾಖಲಿಸಿದೆ.

ವಿವಿಧ ಮೆಡಿಕಲ್‌ ಕಂಪನಿಗಳು ಔಷಧೋತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ₹15,102 ಕೋಟಿ ಹೂಡಿಕೆ ಮಾಡಿದ್ದು, ಇದರಿಂದ ಈ ವಲಯದಲ್ಲಿ ದೇಶೀಯ ಮೌಲ್ಯ ಶೇ.83.7ರಷ್ಟು ವೃದ್ಧಿಸಿದೆ. ಇನ್ನೊಂದೆಡೆ ಬಲ್ಕ್‌ ಡ್ರಗ್ಸ್‌ನಲ್ಲಿ ಭಾರತ ಈಗ ರಫ್ತುದಾರ ರಾಷ್ಟ್ರವಾಗಿ ಹೊರ ಹೊಮ್ಮಿದೆ. 2022ರ ವೇಳೆಗೆ ₹1,930 ಕೋಟಿ ಮೌಲ್ಯದ ಬಲ್ಕ್‌ ಡ್ರಗ್ಸ್‌ ಆಮದು ಮಾಡಿಕೊಳ್ಳುತ್ತಿದ್ದ ರಾಷ್ಟ್ರವೀಗ ₹2,280 ಕೋಟಿ ಮೌಲ್ಯದ ಉತ್ಪನ್ನ ರಫ್ತು ಮಾಡುವಷ್ಟರ ಮಟ್ಟಿಗೆ ಅಮೋಘ ಸಾಧನೆ ಪ್ರದರ್ಶಿಸಿದೆ.

*ಫೈಬರ್, ಜವಳಿ ರಫ್ತು ಹೆಚ್ಚಳ:*

ಪಿಎಲ್‌ಐ ಯೋಜನೆ ನೆರವಿನಿಂದ 2024-25ರಲ್ಲಿ ಭಾರತದ ಫೈಬರ್‌ ಉತ್ಪನ್ನಗಳ ರಫ್ತು $6 ಬಿಲಿಯನ್‌ ತಲುಪಿದೆ. ಅಂತೆಯೇ ಜವಳಿ ಉದ್ಯಮದಲ್ಲೂ ಪ್ರಗತಿ ಕಂಡಿದ್ದು, 2025ರಲ್ಲಿ ಭಾರತದ ಜವಳಿ ರಫ್ತು $3.3 ಬಿಲಿಯನ್‌ ತಲುಪಿದ್ದು, ಇದು 2023-24ರ $2.9 ಬಿಲಿಯನ್‌ಗಿಂತ ಹೆಚ್ಚಾಗಿದೆ.

*ದೇಸಿ ಉದ್ಯಮಕ್ಕೆ ಚೈತನ್ಯ ಪಿಎಲ್‌ಐ:*

ಕೇಂದ್ರ ಸರ್ಕಾರದ ಈ ಪಿಎಲ್‌ಐ ಯೋಜನೆಗಳು ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ದಿಮೆಗಳಿಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಸಫಲವಾಗಿದ್ದು, ಭವಿಷ್ಯದಲ್ಲಿ ಈ ಯಶಸ್ಸನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ ಭಾರತ. ಹೊಸ ಹೊಸ ಹೂಡಿಕೆಯನ್ನು ಆಕರ್ಷಿಸುವ ಜತೆಗೆ ದೇಶೀಯ ಉತ್ಪಾದನೆ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande