ವಾಷಿಂಗ್ಟನ್, 26 ಜುಲೈ (ಹಿ.ಸ.) :
ಆ್ಯಂಕರ್ : ಸಿರಿಯಾದಲ್ಲಿ ನಡೆದ ಗೆರಿಲ್ಲಾ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆ ಐಸಿಸ್‌ನ ಹಿರಿಯ ನಾಯಕ ದಿಯಾ ಜೌಬಾ ಮುಸ್ಲಿಹ್ ಅಲ್-ಹರಾದಾನಿ ಮತ್ತು ಅವನ ಇಬ್ಬರು ಪುತ್ರರನ್ನು ಹತ್ಯೆ ಮಾಡಿದೆ ಎಂದು ಅಮೆರಿಕದ ಕೇಂದ್ರ ಕಮಾಂಡ್ (ಸೆಂಟ್ಕಾಮ್) ಪ್ರಕಟಣೆಯಲ್ಲಿ ತಿಳಿಸಿದೆ.
ಅಬ್ದುಲ್ಲಾ ದಿಯಾ ಅಲ್-ಹರಾದಾನಿ ಮತ್ತು ಅಬ್ದುಲ್-ರಹಮಾನ್ ದಿಯಾ ಅಲ್-ಹರಾದಾನಿ ಅವರು ಅಮೆರಿಕ ಹಾಗೂ ಹೊಸ ಸಿರಿಯನ್ ಸರ್ಕಾರಕ್ಕೆ ಭದ್ರತಾ ಬೆದರಿಕೆ ಎಬ್ಬಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಲಾಗಿದೆ.
ಐಸಿಸ್ ಭಯೋತ್ಪಾದಕರು ಎಲ್ಲಿ ಇರಲಿ, ನಾವು ಅವರನ್ನು ಬಿಡುವುದಿಲ್ಲ ಎಂದು ಸೆಂಟ್ಕಾಮ್ ಕಮಾಂಡರ್ ಜನರಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.
ಅಮೆರಿಕವು ಕಳೆದ ಕೆಲವು ತಿಂಗಳಿಂದ ಸಿರಿಯಾ ಮತ್ತು ಇರಾಕ್ ಪ್ರದೇಶಗಳಲ್ಲಿ ಐಸಿಸ್ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಮಾರ್ಚ್ ಹಾಗೂ ಮೇ ತಿಂಗಳಲ್ಲಿ ಕೂಡ ಐಸಿಸ್ ನಾಯಕರು ಅಮೆರಿಕದ ದಾಳಿಗೆ ಬಲಿಯಾಗಿದ್ದರು. ಏಪ್ರಿಲ್‌ನಲ್ಲಿ ಅಮೆರಿಕವು ಸಿರಿಯಾದಿಂದ ಅರ್ಧದಷ್ಟು ಪಡೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದು, ಇದೀಗ ಹತ್ತಾರು ಯೋಧರು ಮಾತ್ರ ಉಳಿದಿದ್ದಾರೆ ಎಂದು ಪೆಂಟಗನ್ ಮಾಹಿತಿ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa