ನಮ್ಮ ಶಾಲೆ ನಮ್ಮ ಜವಾಬ್ದಾರಿ, ಮಕ್ಕಳಲ್ಲಿ ಜಾಗೃತಿ
ಗದಗ, 02 ಜುಲೈ (ಹಿ.ಸ.) : ಆ್ಯಂಕರ್ : 2025-26ನೇ ಶೈಕ್ಷಣಿಕ ಸಾಲಿನಲ್ಲಿ ರೋಣ ತಾಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಶಿಕ್ಷಣ ಇಲಾಖೆಯ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ರೂಪರೇಷೆಯನ್ನು ಸಿದ
ಪೋಟೋ


ಗದಗ, 02 ಜುಲೈ (ಹಿ.ಸ.) :

ಆ್ಯಂಕರ್ : 2025-26ನೇ ಶೈಕ್ಷಣಿಕ ಸಾಲಿನಲ್ಲಿ ರೋಣ ತಾಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಶಿಕ್ಷಣ ಇಲಾಖೆಯ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ರೂಪರೇಷೆಯನ್ನು ಸಿದ್ದಪಡಿಸಿದ್ದು ಜುಲೈ ತಿಂಗಳನಿಂದ ಬಹುತೇಕ ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮ ಆರಂಭ ಮಾಡಲಾಗುತ್ತಿದೆ.

ಈ ಕುರಿತು ಗದಗ ಜಿಲ್ಲೆ ರೋಣ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಮಾಹಿತಿ ನೀಡಿದರು.

ಈ ಕಾರ್ಯಕ್ರಮವು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಹಾಗು ಸರಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಶಾಲೆ-ಕಾಲೇಜುಗಳತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುವುದು ಮತ್ತು ತರಗತಿಯಿಂದ ಹೊರಗುಳಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಸಿದ್ದಪಡಿಸಿದೆ ಎಂದರು.

ಕಾರ್ಯಕ್ರಮದ ಉದ್ದೇಶಗಳು ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಕ್ಷೀರಭಾಗ್ಯ, ಮೊಟ್ಟೆ/ಬಾಳೆಹಣ್ಣು, ರಾಗಿಮಾಲ್ಟ್, ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳ ಮೂಲಕ ಮಕ್ಕಳಲ್ಲಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿವಾರಿಸುವ ಬಗ್ಗೆ , ಕ್ರೀಡೆ ಮತ್ತು ಶೌಚಾಲಯ, ಕುಡಿಯುವ ನೀರು ಮತ್ತು ಇನ್ನೂ ಹಲವಾರು ಯೋಜನೆಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು. ಆಧುನಿಕ ಕಲಿಕಾ ಸೌಲಭ್ಯಗಳಾದ ಸ್ಮಾರ್ಟ್ ಕ್ಲಾಸ್‌ರೂಮ್, ಡಿಜಿಟಲ್ ಲೈಬ್ರರಿ, ಗುಣಮಟ್ಟದ ಶಿಕ್ಷಕರು ಮತ್ತು ಶೈಕ್ಷಣಿಕ ಪ್ರೋತ್ಸಾಹಕ ಯೋಜನೆಗಳ ಕುರಿತು ಮಾಹಿತಿ ಹಂಚುವುದು. ದಾಖಲಾದ ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಕಲಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖಾತರಿಪಡಿಸುವ ಯೋಜನೆ ಇದಾಗಿದೆ.

ಕಾರ್ಯಕ್ರಮದ ರೂಪುರೇಷೆ, ರೋಣ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಪಾಲಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಬಿಸಿಯೂಟದ ಅಡುಗೆ ಸಿಬ್ಬಂದಿ, ಗ್ರಾಮ ಪಂಚಾಯಿತಿ/ವಾರ್ಡ್ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮೀಪದ ಶಾಲೆಗಳ ಮುಖ್ಯ ಶಿಕ್ಷಕರು, ಮತ್ತು ಉಪನ್ಯಾಸಕರು ಮತ್ತು ಎಲ್ಲಾ ಭಾಗಿದಾರರನ್ನು ಒಳಗೊಳಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸರ್ವೆ ಶೀಟ್‌ಗಳನ್ನು ನೀಡಿ, ಶಾಲೆ-ಕಾಲೇಜುಗಳ ಮೂಲ ಸೌಕರ್ಯ, ಶೈಕ್ಷಣಿಕ ಸೌಲಭ್ಯ, ಕಲಿಕೆಯ ಗುಣಮಟ್ಟ ಮತ್ತು ವಾತಾವರಣದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಜೊತೆಗೆ, ಸಂವಾದದ ಮೂಲಕ ಸಲಹೆಗಳನ್ನು ಸ್ವೀಕರಿಸಿ, ಶಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

ಆಡಳಿತಾತ್ಮಕ ಬೆಂಬಲ, ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ನಿರ್ದೇಶಕರು, ಜಿಲ್ಲಾ ಮಟ್ಟದ ಸಿಇಒ, ಡಿಡಿಪಿಐ, ಡಿಡಿಪಿಯು, ತಾಲೂಕು/ವಲಯ ಮಟ್ಟದ ತಾಪಂ ಇಒ, ಬಿಇಒ, ಬಿ.ಆರ್.ಸಿ. ಸಿ.ಆರ್.ಪಿ. ಮುಖ್ಯ ಶಿಕ್ಷಕರು, ಪ್ರಾಚಾರ್ಯರು ಮತ್ತು ಅಡುಗೆ ಸಿಬ್ಬಂದಿ ಸೇರಿದಂತೆ ಮೇಲ್ವಿಚಾರಣಾ ತಂಡಗಳು ಸಹಕಾರ ನೀಡಲಿವೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿನ ಆಯ್ದ ಶಾಲೆಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂಬಂಧಿತರಿಗೆ ಮಾರ್ಗದರ್ಶನ ನೀಡಲಾಗಿದೆ.

ಕಾರ್ಯಕ್ರಮದ ಮಹತ್ವ, ಈ ಶೈಕ್ಷಣಿಕ ಸಾಲಿನಿಂದ ಆರಂಭವಾದ ಈ ಕಾರ್ಯಕ್ರಮವು ಈಗ ಮುಂದುವರಿದ ರೂಪದಲ್ಲಿ ಸಮುದಾಯದಲ್ಲಿ ಶಿಕ್ಷಣದ ಜಾಗೃತಿಯನ್ನು ತರುತ್ತಿದೆ. ಹಳೆಯ ವಿದ್ಯಾರ್ಥಿಗಳಲ್ಲಿ ತಾವು ಓದಿದ ಶಾಲೆ-ಕಾಲೇಜುಗಳ ಬಗ್ಗೆ ಅಭಿಮಾನ ಮೂಡಿಸುವ ಜೊತೆಗೆ, ಅವರಿಂದ ಶಾಲೆಯ ಅಭಿವೃದ್ಧಿಗೆ ಕೊಡುಗೆಗಳನ್ನು ಪಡೆಯುವುದು ಮತ್ತು ಪೋಷಕರಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಕುರಿತು ವಿಶ್ವಾಸ ತುಂಬುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ,” ಎಂದು ರೋಣ ತಾಲೂಕಿನ ಬಿಇಓ ಎಂ. ಏ.ಫನಿಭಂದ ಹೇಳಿದರು.

ಕಾರ್ಯಕ್ರಮದ ಅವಧಿ, ರೋಣ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳು ಈ ಕಾರ್ಯಕ್ರಮವನ್ನು ಜುಲೈ ತಿಂಗಳಿನಿಂದ ಆಯೋಜಿಸಲಾಗುವದು, 2025-2026ನೇ ಶೈಕ್ಷಣಿಕ ಸಾಲಿನ ಪೂರ್ತಿ ನಡೆಸಲಾಗುವುದು. ಈ ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande