ಗದಗ, 18 ಜುಲೈ (ಹಿ.ಸ.) :
ಆ್ಯಂಕರ್ : ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ರೌಡಿಶೀಟರ ಬಿಕ್ಲ ಶಿವ ಕೊಲೆ ಪ್ರಕರಣ, ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ, ಮೀಸಲಾತಿ ವಿಷಯ ಹಾಗೂ ಬಿಜೆಪಿ ನಾಯಕರ ಆರೋಪಗಳ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ರೌಡಿಶೀಟರ್ ಬಿಕ್ಲ ಶಿವ ಕೊಲೆ ಪ್ರಕರಣ : ಬೆಂಗಳೂರಿನ ಭಾರತಿನಗರದಲ್ಲಿ ರೌಡಿಶೀಟರ್ ಶಿವಪ್ರಕಾಶ್ (ಬಿಕ್ಲ ಶಿವ) ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹೆಸರು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಲಾಡ್, ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲಾ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿರುತ್ತಾರೆ. ಈ ವಿಷಯದಲ್ಲಿ ಗೃಹ ಸಚಿವರನ್ನು ಕೇಳಿ, ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರೊಂದಿಗೆ ಸುರ್ಜೇವಾಲ ಸಭೆ ವಿಚಾರವಾಗಿ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರೊಂದಿಗೆ ಸಭೆ ನಡೆಸಿರುವ ಬಗ್ಗೆ ಮಾತನಾಡಿದ ಲಾಡ್, ಪಕ್ಷದಲ್ಲಿ ಶಿಸ್ತು ತರಲು ಸುರ್ಜೇವಾಲ ಅವರು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ನಿಮಗೆ ಏನಾದರೂ ಗೊತ್ತಿದ್ದರೆ ನನಗೆ ಹೇಳಿ, ಎಂದು ಚಟಾಕಿಯಾಗಿ ಉತ್ತರಿಸಿದರು.
ಪ್ರತಾಪ್ ಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು, ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು ಸಂತೋಷ ಲಾಡ್ ಬಂಡವಾಳವನ್ನು ಬಯಲು ಮಾಡುತ್ತೇನೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಲಾಡ್, ಅವರಿಗೆ ಒಳ್ಳೆಯದಾಗಲಿ. ಮೊದಲಿನಿಂದಲೂ ನಾನು ಯಾರಿಗೂ ಬೈದಿಲ್ಲ. ನಮ್ಮ ಬಗ್ಗೆ ಏನಾದರೂ ಎಕ್ಸ್‌ಪೋಸ್ ಮಾಡುತ್ತೇನೆ ಎಂದರೆ ಒಳ್ಳೆಯದೇ ತಾನೇ, ಎಂದು ವ್ಯಂಗ್ಯವಾಡಿದರು.
ದಲಿತ ಸಿಎಂ ಚರ್ಚೆ ದಲಿತ ಸಿಎಂ ಚರ್ಚೆಯ ಕುರಿತು ಮಾತನಾಡಿದ ಸಚಿವ ಲಾಡ್, ಬಿಜೆಪಿಯವರು ತಮ್ಮ ನಾಯಕ ನಾರಾಯಣಸ್ವಾಮಿಯನ್ನು ಮುಂದಿನ ಸಿಎಂ ಆಗಿ ಘೋಷಣೆ ಮಾಡುತ್ತಾರೆಯೇ? ಅವರು ತಮ್ಮ ಗಮನ ಸೆಳೆಯಲು ಇಂತಹ ವಿಷಯಗಳನ್ನು ಹುಟ್ಟುಹಾಕಿ ಮಾತನಾಡುತ್ತಾರೆ. ಇನ್ನೂ ಮೂರು ವರ್ಷಗಳ ಕಾಲ ಚುನಾವಣೆ ಇಲ್ಲ. ಆಗ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ನಮಗೂ ಹೈಕಮಾಂಡ್ ಇದೆ, ಅವರಿಗೂ ಇದೆ, ಎಂದು ತಿರುಗೇಟು ನೀಡಿದರು.
ಹಿಂದುಳಿದ ವರ್ಗದ ಮೀಸಲಾತಿ ಕುರಿತು ಮಾತನಾಡಿದರು, ಹಿಂದುಳಿದ ವರ್ಗಗಳ ಮೀಸಲಾತಿ ವಿಷಯದ ಬಗ್ಗೆ ಮಾತನಾಡಿದ ಸಚಿವ ಲಾಡ್, ದೇಶದಲ್ಲಿ ಸುಮಾರು 2600 ಹಿಂದುಳಿದ ವರ್ಗದ ಜಾತಿಗಳಿವೆ. ಆದರೆ, ಬೇರೆ ಬೇರೆ ರಾಜ್ಯಗಳಲ್ಲಿ ಒಂದೇ ರೀತಿಯಾಗಿಲ್ಲ. ಕಾನೂನಿನಲ್ಲಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಗುರ್ತಿಸಿ ಮೀಸಲಾತಿ ನೀಡಲಾಗುತ್ತದೆ. ಎಲ್ಲರಿಗೂ ಸಮಾನವಾಗಿ ಮೀಸಲಾತಿ ಸಿಗಬೇಕೆಂಬ ಉದ್ದೇಶದಿಂದ ಕಾನೂನು ರೂಪಿಸಲಾಗುತ್ತಿದೆ, ಎಂದು ಸ್ಪಷ್ಟಪಡಿಸಿದರು.
ಸಚಿವ ಸಂತೋಷ ಲಾಡ್ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದವನ್ನು ಮತ್ತಷ್ಟು ತೀವ್ರಗೊಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Lalita MP