ಬೆಂಗಳೂರು, 11 ಜುಲೈ (ಹಿ.ಸ.) :
ಆ್ಯಂಕರ್ : ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಖ್ಯಾತ ನಟಿ ಶ್ರುತಿ ಅವರು ತಮ್ಮ ಪತಿ ಅಮರೇಶ್ ಅವರಿಂದ ಚಾಕು ಇರಿತಕ್ಕೆ ಒಳಗಾಗಿದ್ದಾರೆ.
ಶೀಲ ಶಂಕೆ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪತ್ನಿಯ ಕಣ್ಣಿಗೆ ಮೊದಲು ಪೆಪ್ಪರ್ ಸ್ಪ್ರೇ ಹಾಕಿದ ಅಮರೇಶ್, ನಂತರ ಹೊಟ್ಟೆ, ತೊಡೆ, ಪಕ್ಕೆಲುಬು ಮತ್ತು ಕುತ್ತಿಗೆಗೆ ಚಾಕು ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಶ್ರುತಿಯನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರುತಿ ಮತ್ತು ಅಮರೇಶ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಹನುಮಂತ ನಗರದಲ್ಲಿ ಲೀಸ್ ಮನೆಗೆ ವಾಸವಾಗಿದ್ದ ಈ ದಂಪತಿಯ ಮಧ್ಯೆ ಮನಸ್ತಾಪಗಳು ನಿರಂತರವಾಗಿದ್ದು, ಶೀಲ ಶಂಕೆ ಹಾಗೂ ಹಣಕಾಸು ವಿಚಾರವಾಗಿ ಜಗಳಗಳು ನಡೆದಿದ್ದವು. ಏಪ್ರಿಲ್‌ನಲ್ಲಿ ಶ್ರುತಿ ತನ್ನ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ರಾಜಿ ಸಂಧಾನವಾಗಿ ಪುನಃ ಒಟ್ಟಿಗೆ ನೆಲೆಸಲು ಮುಂದಾಗಿದ್ದರು.
ಈಗ ಅಮರೇಶ್ ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಪ್ರಕರಣ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa