ನವದೆಹಲಿ, 01 ಜುಲೈ (ಹಿ.ಸ.) :
ಆ್ಯಂಕರ್ : ಸೌರಶಕ್ತಿ ನಿಗಮ ಲಿಮಿಟೆಡ್ 60 ಗಿಗಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಯಿಗಾಗಿ ವಿದ್ಯುತ್ ಮಾರಾಟ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಸಾಧನೆ ಶುದ್ಧ ಇಂಧನದತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.
ಎಸ್ಈಸಿಐ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಸಾರಂಗಿ ಅವರು, ಈ 60 GW ಸಾಮರ್ಥ್ಯದ ಪಿಎಸ್ಎ ಗಳು ಸಂಸ್ಥೆಯ 14 ವರ್ಷದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲು ಎಂದು ತಿಳಿಸಿದ್ದಾರೆ. ಈ ಒಪ್ಪಂದಗಳಲ್ಲಿ ಸೌರ, ಪವನ ಮತ್ತು ಹೈಬ್ರಿಡ್ ಯೋಜನೆಗಳು ಸೇರಿವೆ.
ಈ ದೀರ್ಘಕಾಲೀನ ಪಿಎಸ್ಎ ಗಳು ಯೋಜನಾ ಅಭಿವೃದ್ಧಿಗಾರರು ಮತ್ತು ಹೂಡಿಕೆದಾರರಿಗೆ ಪಾವತಿ ಭದ್ರತೆ ಒದಗಿಸುವ ಮೂಲಕ, ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಆರ್ಥಿಕವಾಗಿ ಸಾಧ್ಯವಾಗಿಸುತ್ತವೆ. ಇವು ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸುತ್ತವೆ ಮತ್ತು ಕಡಿಮೆ ಇಂಗಾಲದ ಆರ್ಥಿಕತೆಯತ್ತ ಬಂಡವಾಳ ಹರಿವನ್ನು ವೇಗಗೊಳಿಸುತ್ತವೆ.
ಭವಿಷ್ಯದ ಯೋಜನೆಗಳಲ್ಲಿ ಹಸಿರು ಜಲಜನಕ, ಹಸಿರು ಅಮೋನಿಯಾ, ಇಂಧನ ಸಂಗ್ರಹಣೆ ಮತ್ತು ಪೂರೈಕೆ ಮಾದರಿಗಳ ಅಭಿವೃದ್ಧಿ ಕೂಡ ಸೇರಿವೆ. ಎಸ್ಈಸಿಐ 2011ರಲ್ಲಿ ಸ್ಥಾಪಿತಗೊಂಡ ಸಾರ್ವಜನಿಕ ವಲಯ ಸಂಸ್ಥೆಯಾಗಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa