ಹುಬ್ಬಳ್ಳಿ, 13 ಜೂನ್ (ಹಿ.ಸ.):
ಆ್ಯಂಕರ್:ಕಳೆದ ಎರಡು ಮೂರು ದಿನದಿಂದ ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಣ್ಣಿಗೇರಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ 130 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾನಿಯಾದ ಮನೆಗಳಿಗೆ ಎಸ್.ಡಿ.ಆರ್.ಎಫ್ ನಿಯಮಾವಳಿಗಳ ಅನುಸಾರ ಪರಿಶೀಲಿಸಿ, ಪರಿಹಾರವನ್ನು ನೀಡಲಾಗುತ್ತದೆ. ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನೂ ಹೆಚ್ಚಾಗಿ ಮಳೆ ಬರುವ ಸಾಧ್ಯತೆಯಿದೆ. ಸಾರ್ವಜನಿಕರು ಜಾಗರೂಕರಾಗಬೇಕಿದೆ. ಜನರು ಸರ್ಕಾರ, ಜಿಲ್ಲಾಡಳಿತ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಹೇಳಿದರು.
ಇಂದು ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಿ ಹಳ್ಳ ದಾಟುವಾಗ ಮಳೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಟ್ರಾಕ್ಟರ್ ಉರುಳಿ ಬಿದ್ದಿದೆ. ಪರಿಣಾಮವಾಗಿ ಶಿವಯ್ಯ ಬಸಯ್ಯ ವಟ್ನಾಳಮಠ ಅವರು ನಿಧನರಾಗಿದ್ದಾರೆ. ಜಾಗೃತಿಯನ್ನು ವಹಿಸಿದ್ದರೆ ಒಂದು ಜೀವ ಉಳಿಯುತ್ತಿತ್ತು. ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆ ನಡೆಯಬಾರದಿತ್ತು. ಶಾಸಕರು, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಮೃತ ಕುಟುಂಬಸ್ಥರಿಗೆ ರೂ.5 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವ ಸಂತೋಷ ಲಾಡ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa