ಕೋಲಾರ, ೦೩ ಏಪ್ರಿಲ್ (ಹಿ.ಸ) :
ಆ್ಯಂಕರ್ :.ಬದುಕಿನ ಅಂಧಕಾರ ಓಡಿಸಿ ಸಮಾಜಕ್ಕೆ ಅಕ್ಷರದ ಬೆಳಕು ನೀಡುವ ಶಿಕ್ಷಕರ ಪ್ರಯತ್ನಕ್ಕೆ ತರಬೇತಿಗಳ ಮೂಲಕ ಪ್ರೇರಣೆ ನೀಡುವ ಅಮೂಲ್ಯ ವೃತ್ತಿಯ ಘನತೆ ಎತ್ತಿ ಹಿಡಿಯುವ ಕೆಲಸ ಮಾಡೋಣ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಕಂಕಣ ತೊಡೋಣ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಎಸ್.ಚಂದ್ರಪಾಟೀಲ್ ಕರೆ ನೀಡಿದರು.
ನಗರ ಹೊರವಲಯದ ಜಿಲ್ಲಾ ಶಿಕ್ಷಣ ಮತ್ತುತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿ ಪದೋನ್ನತಿ ಹೊಂದಿದ ಬಿ.ಜಿ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಆಧುನಿಕತೆಗೆ ತಕ್ಕಂತೆ ಇಂದು ಶಿಕ್ಷಣ ವ್ಯವಸ್ಥೆಯಲ್ಲೂ ಅಮೂಲಾಗ್ರ ಬದಲಾವಣೆ ಆಗುತ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರನ್ನು ಸಿದ್ದಗೊಳಿಸುವ ಹೊಣೆ ನಮಗಿದೆ, ಅದಕ್ಕಾಗಿಯೇ ಶಾಲಾ ಶಿಕ್ಷಣ ಇಲಾಖೆ ನಮ್ಮನ್ನು ನೇಮಿಸಿದ್ದು, ನಾವು ನಮ್ಮ ಹುದ್ದೆಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದರು.
ಶಿಕ್ಷಣದಲ್ಲಿ ಇಂದು ಆಧುನಿಕ ತಂತ್ರಜ್ಞಾನ, ಕಂಪ್ಯೂಟರ್ ಶಿಕ್ಷಣ ಪ್ರಮುಖ ಸ್ಥಾನ ಪಡೆದುಕೊಂಡಿವೆ, ಈ ನಡುವೆ ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಮೂಲಕ ಅಲ್ಲಿಯೂ ಮಕ್ಕಳಿಗೆ ಗುಣಮಟ್ಟದ ಆಧುನಿಕತೆ ತಕ್ಕಂತೆ ತಾಂತ್ರಿಕ ಶಿಕ್ಷಣ ಒದಗಿಸುವ ಪ್ರಯತ್ನ ಇಂದಿನ ಅಗತ್ಯವಾಗಿದೆ ಎಂದರು.
ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಅಗತ್ಯವಾದ ತರಬೇತಿ ನೀಡುವ ಡಯಟ್ ಉಪನ್ಯಾಸಕರಿಗೆ ಇಂದು ಹೆಚ್ಚಿನ ಜವಾಬ್ದಾರಿ ಇದೆ, ಕಲಿಕಾ ವಿಧಾನದಲ್ಲಿ ಬದಲಾವಣೆ ತಾರದಿದ್ದರೆ ಶೈಕ್ಷಣಿಕವಾಗಿ ನಿಗಧಿತ ಗುರಿ ಸಾಧಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನಾವು ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿಕೊಂಡು ಶಾಲೆಗಳಿಗೆ ಅಗತ್ಯವಾದ ಸುಸಜ್ಜಿತ ಸೌಲಭ್ಯಗಳನ್ನು ಪಡೆಯಲು ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡುವ ಅಗತ್ಯವಿದೆ, ಈ ನಿಟ್ಟಿನಲ್ಲಿ ಡಯಟ್‌ನ ಎಲ್ಲಾ ಉಪನ್ಯಾಸಕರು ಶ್ರಮಿಸಬೇಕು ಎಂದರು.
ಉಪ ಪ್ರಾಂಶುಪಾಲ ನಂಜುAಡಯ್ಯ ಮಾತನಾಡಿ, ಸಮಾನ ಶಿಕ್ಷಣ ಉಳಿದರೆ ಮಾತ್ರವೇ ಸಮ ಸಮಾಜ ನಿರ್ಮಾಣದ ಸಂವಿಧಾನದ ಕಲ್ಪನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಬಲಗೊಳಿಸುವ ಅಗತ್ಯವಿದೆ ಮತ್ತು ದಾಖಲಾತಿ ಕುಸಿತ ಆತಂಕಕಾರಿ ಬೆಳವಣಿಗೆಯಾಗಿದ್ದು, ಶಿಕ್ಷಕರು ಹೆಚ್ಚಿನ ನಿಗಾ ವಹಿಸುವಂತೆ ಮಾಡುವಲ್ಲಿ ಡಯಟ್ ಉಪನ್ಯಾಸಕರು ಮುಂಚೂಣಿಯಲ್ಲಿರಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದೋನ್ನತಿ ಹೊಂದಿದ ಹಿರಿಯ ಉಪನ್ಯಾಸಕ ಬಿ.ಜಿ.ನಾರಾಯಣಸ್ವಾಮಿ, ತಾವೂ ಸಹಾ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಶಾಲೆಗಳ ಪರಿಸ್ಥಿತಿಯ ಅನುಭವವಿದೆ, ಈ ನಿಟ್ಟಿನಲ್ಲಿ ಡಯಟ್ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಶಾಲೆಗಳು ಮತ್ತು ಬೋಧನಾ ವಿಧಾನದಲ್ಲಿ ಬದಲಾವಣೆಗೆ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಕೋಲಾರ ಜಿಲ್ಲೆ ಕಳೆದ ಐದಾರು ವರ್ಷಗಳಿಂದ ಉತ್ತಮ ಸಾಧನೆ ಮಾಡಿತ್ತು, ಕಳೆದ ವರ್ಷ ಸ್ವಲ್ಪಮಟ್ಟಿನ ಹಿನ್ನಡೆಯಾಗಿದ್ದು, ಅದು ಸರಿಹೋಗಬೇಕು, ಶಿಕ್ಷಕರಿಗೆ ಅಗತ್ಯವಾದ ಇಲಾಖೆ ಸೂಚಿಸಿರುವ ತರಬೇತಿಗಳನ್ನು ಒದಗಿಸುವ ಕಾರ್ಯವನ್ನು ಬದ್ದತೆಯಿಂದ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರುಗಳಾದ ತಿಮ್ಮಯ್ಯ, ಅನುರಾಧ, ನಾಗರಾಜು ಹಾಗೂ ಉಪನ್ಯಾಸಕರಾದ ಬಾಲಾಜಿ ಲಲಿತಮ್ಮ, ನಾರಾಯಣಸ್ವಾಮಿ ಹಾಗೂ ಇತರ ಸಿಬ್ಬಂದಿ ಹಾಜರಿದ್ದು ಶುಭ ಹಾರೈಸಿದರು.
ಚಿತ್ರ : ಕೋಲಾರ ಹೊರವಲಯದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿ ಪದೋನ್ನತಿ ಹೊಂದಿದ ಬಿ.ಜಿ.ನಾರಾಯಣಸ್ವಾಮಿ ಅವರನ್ನು ಸಂಸ್ಥೆ ಪ್ರಾಂಶುಪಾಲ ಎಸ್.ಚಂದ್ರಪಾಟೀಲ್ ಹಾಗೂ ಸಹೋದ್ಯೋಗಿಗಳು ಸನ್ಮಾನಿಸಿ, ಶುಭ ಕೋರಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್